ಸಂಪೂರ್ಣ ಸಿರಿಯ ಮರು ವಶಪಡಿಸುವೆ

‘ಭಯೋತ್ಪಾದನೆ ವಿರುದ್ಧ ಸಮರದ ಜೊತೆಗೆ ಸಂಧಾನಕ್ಕೂ ಸಿದ್ಧ’
ಡಮಾಸ್ಕಸ್,ಫೆ.14: ಅಂತರ್ಯುದ್ಧದಿಂದ ಒಡೆದು ಹೋಳಾಗಿರುವ ಸಿರಿಯವನ್ನು ಮತ್ತೆ ಸಂಪೂರ್ಣವಾಗಿ ವಶಪಡಿಸಿಕೊಳ್ಳುವುದಾಗಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ರವಿವಾರ ಘೋಷಿಸಿದ್ದಾರೆ.ಭಯೋತ್ಪಾದನೆಯ ವಿರುದ್ಧ ಹೋರಾಡುವ ಜೊತೆಗೆ, ಯುದ್ಧವನ್ನು ಅಂತ್ಯಗೊಳಿಸಲು ಸಂಧಾನಕ್ಕೂ ಸಿದ್ಧನಿರುವುದಾಗಿ ಅವರು ಹೇಳಿದ್ದಾರೆ. ಸಿರಿಯದ ಬಂಡುಕೋರರ ಜೊತೆ ಕದನವಿರಾಮ ಏರ್ಪಡಿಸುವಂತೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚುತ್ತಿರುವಾಗಲೇ ಅವರು ಈ ಹೇಳಿಕೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ಎಎಫ್‌ಪಿಗೆ ಅವರು ನೀಡಿದ್ದ ಈ ವಿಶೇಷ ಸಂದರ್ಶನದ ವಿವರಗಳನ್ನು ಶನಿವಾರ ಪ್ರಕಟಿಸಲಾಗಿದೆ. ಬಶರ್ ಅವರ ಈ ಹೇಳಿಕೆಯು ಸಿರಿಯದಲ್ಲಿ ಸಂಘರ್ಷವು ಶೀಘ್ರದಲ್ಲಿ ಕೊನೆಗೊಳ್ಳುವ ಕುರಿತ ಆಶಾವಾದಕ್ಕೆ ತಣ್ಣೀರೆರಚಿದೆ.
ಟರ್ಕಿಯಿಂದ ಬಂಡುಕೋರರಿಗೆ ಶಸ್ತ್ರಾಸ್ತ್ರಗಳ ಪೂರೈಕೆ ಮಾರ್ಗವನ್ನು ಕಡಿದುಹಾಕುವ ಉದ್ದೇಶದಿಂದಲೇ ಸಿರಿಯ ಸೇನೆಯು,ರಶ್ಯದ ನೆರವಿನೊಂದಿಗೆ ಅಲೆಪ್ಪೊ ಪ್ರಾಂತ್ಯದಲ್ಲಿ ದಾಳಿ ನಡೆಸಿರುವುದಾಗಿ ಅಸ್ಸಾದ್ ಹೇಳಿದ್ದಾರೆ.ಅಲೆಪ್ಪೊ ಪ್ರಾಂತದಲ್ಲಿ ಸಿರಿಯ ಸೇನೆಯ ದಾಳಿಯಿಂದಾಗಿ ಸಹಸ್ರಾರು ನಾಗರಿಕರು ಮನೆಮಾರು ತೊರೆದು ಪಲಾಯನಗೈದಿದ್ದರು.
ಪ್ರಸ್ತುತ ಬಂಡುಕೋರರು ಅಥವಾ ಐಸಿಸ್ ನಿಯಂತ್ರಣದಲ್ಲಿರುವ ವಿಶಾಲ ಪ್ರದೇಶಗಳನ್ನು ಮರುವಶಪಡಿಸಿಕೊಳ್ಳುವದೇ, ತನ್ನ ಸರಕಾರದ ಗುರಿಯೆಂದು ಅವರು ಹೇಳಿದ್ದಾರೆ. ಟರ್ಕಿ, ಜೋರ್ಡಾನ್ ಹಾಗೂ ಇರಾಕ್‌ನಿಂದ ಬಂಡುಕೋರರಿಗೆ ಶಸ್ತ್ರಾಸ್ತ ಪೂರೈಕೆಯಾಗುವ ಮಾರ್ಗಗಳನ್ನು ಕಡಿದುಹಾಕಿದಲ್ಲಿ, ವರ್ಷದೊಳಗೆ ಸಿರಿಯ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯ.
-ಬಶರ್ ಅಲ್-ಅಸ್ಸಾದ್, ಸಿರಿಯ ಅಧ್ಯಕ್ಷ





