ಕನ್ಹಯ್ಯ ಕುಮಾರ್, ಜಾವಿದ್ ಬಂಧನ ಖಂಡಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆ: ಸುಧಾಕರ ರೆಡ್ಡಿ
ಬೆಂಗಳೂರು, ಫೆ.14: ಹೊಸದಿಲ್ಲಿಯ ಜವಾಹರ್‌ಲಾಲ್ ವಿಶ್ವವಿದ್ಯಾನಿಲಯ (ಜೆಎನ್‌ಯು)ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಪ್ರಗತಿಪರ ಲೇಖಕರ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಅಲೀ ಜಾವಿದ್ ಅವರನ್ನು ‘ದೇಶದ್ರೋಹ’ದ ಸುಳ್ಳು ಆರೋಪದಡಿ ಬಂಧಿಸಿರು ವುದನ್ನು ಖಂಡಿಸಿ ಸಿಪಿಐ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಸುರವರಂ ಸುಧಾಕರರೆಡ್ಡಿ ತಿಳಿಸಿದ್ದಾರೆ.
ರವಿವಾರ ನಗರದ ಭಾರತೀಯ ಕಮ್ಯೂನಿಸ್ಟ್ ಪಕ್ಷ(ಸಿಪಿಐ)ದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೊಸದಿಲ್ಲಿಯ ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಬಿವಿಪಿಯನ್ನು ಸೋಲಿಸಿ ಜಯಗಳಿಸಿದ ಹಿನ್ನೆಲೆಯಲ್ಲಿ ಎಐಎಸ್‌ಎಫ್ ನಾಯಕ ಕನ್ಹಯ್ಯೆ ಕುಮಾರ್ ಮತ್ತು ಅಲೀ ಜಾವಿದ್ ಅವರನ್ನು ಬಂಧಿಸಲಾಗಿದೆ. ಈ ಅನ್ಯಾಯವನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್ ಮಾತನಾಡಿ, ಹೊಸದಿಲ್ಲಿಯ ಜವಾಹರ್‌ಲಾಲ್ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಪ್ರಗತಿಪರ ಲೇಖಕ ಅಲೀ ಜಾವಿದ್‌ಅವರನ್ನು ಸುಳ್ಳು ಆರೋಪದಡಿ ಬಂಧಿಸಿರುವುದನ್ನು ಖಂಡಿಸಿ ಫೆ.15ರ ಸೋಮವಾರ ಮಧ್ಯಾಹ್ನ 3ಗಂಟೆಗೆ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಹ ಕಾರ್ಯದರ್ಶಿ ಡಿ.ಎ. ವಿಜಯಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.





