ಪುತ್ತಿಗೆ ಜಿ.ಪಂ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಚುನಾವಣೆ ಪ್ರತಿಷ್ಠೆಯ ಕಣದ ನಾಲ್ವರಲ್ಲಿ ಜನರ ಒಲವು ಯಾರ ಕಡೆಗೆ...?

ಮೂಡುಬಿದಿರೆ : ಜಿ,ಪಂ, ತಾ.ಪಂ ಚುನಾವಣೆಗೆ ಇನ್ನು ಕೇವಲ 4 ದಿನವಷ್ಟೇ ಬಾಕಿ ಉಳಿದಿದ್ದು, ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಪುತ್ತಿಗೆ ಜಿ.ಪಂ ಕ್ಷೇತ್ರದಲ್ಲಿ ಮೀಸಲಾತಿಯು ಸಾಮಾನ್ಯವಾಗಿದ್ದು, ಇಲ್ಲಿ ಜಿದ್ದಾಜಿದ್ದಿನ ಚುನಾವಣೆಗೆ ನಾಲ್ಕು ಪಕ್ಷದ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಪ್ರತಿಷ್ಠೆಯ ಕಣವಾಗಿರುವ ಈ ಕ್ಷೇತ್ರದಲ್ಲಿ ಜನರ ಒಲವು ಯಾರ ಕಡೆಗಿದೆ ಎಂಬುದನ್ನು ಮಾತ್ರ ಕಾದು ನೋಡಬೇಕಾಗಿದೆ. ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವಾಗಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಬಂದಿರುವ ಕೆ.ಪಿ ಸುಚರಿತ ಶೆಟ್ಟಿ ಬಿಜೆಪಿಯಿಂದ, ಉದ್ಯಮಿ ತೋಡಾರಿನ ದಿವಾಕರ ಶೆಟ್ಟಿ ಜೆಡಿಎಸ್‌ನಿಂದ, ಏರಿಮಾರು ಚಂದ್ರಹಾಸ ಸನಿಲ್ ಕಾಂಗ್ರೆಸ್‌ನಿಂದ ಹಾಗೂ ಮಂಗಳೂರಿನಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪ.ಪೂ ಶಿಕ್ಷಣವನ್ನು ಪೂರೈಸಿರುವ, ಸದಾ ಹೋರಾಟದ ಮನೋಭಾವವನ್ನು ಹೊಂದಿರುವ ಯಾದವ ಶೆಟ್ಟಿ ಅವರು ಸಿಪಿಐಎಂ ಬೆಂಬಲದೊಂದಿಗೆ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ನಾಲ್ವರು ಕೂಡಾ ಈ ಬಾರಿ ಜನತೆ ತಮ್ಮನ್ನೇ ಆಯ್ಕೆ ಮಾಡುತ್ತಾರೆಂದು ಅವರವರೇ ವಿಶ್ವಾಸವನ್ನು ಹೊಂದಿ ಈಗಾಗಲೇ ಸಾಕಷ್ಟು ರೀತಿಯಲ್ಲಿ ಸಭೆ,ಪ್ರಚಾರವನ್ನು ಮಾಡಿ ಮತಗಳನ್ನು ಯಾಚಿಸಿದ್ದಾರೆ.
ಕಳೆದ ಬಾರಿಯ ಜಿ.ಪಂ ಚುನಾವಣೆಯಲ್ಲಿ ಪುತ್ತಿಗೆ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಬಂದಿದ್ದು, ಅದರಲ್ಲಿ ಜೆಡಿಎಸ್‌ನಿಂದ ಆಗಷ್ಟೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಕೆ.ಪಿ ಸುಚರಿತ ಶೆಟ್ಟಿ ಅವರ ಪತ್ನಿ ಪಾಲಡ್ಕ ಗ್ರಾ.ಪಂ ಸದಸ್ಯೆಯಾಗಿ ಮತ್ತು ಅಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಅನುಭವವನ್ನು ಪಡೆದಿರುವ ಸುನೀತಾ ಸುಚರಿತ ಶೆಟ್ಟಿ, ಈಗಿನ ಜೆಡಿಎಸ್ ಅಭ್ಯರ್ಥಿ ದಿವಾಕರ ಶೆಟ್ಟಿ ಅವರ ಪತ್ನಿ ಅಮಿತಾ ಶೆಟ್ಟಿ ಹಾಗೂ ಬಹಳ ಹಿಂದೆ ಜಿ.ಪಂ ಉಪಾಧ್ಯಕ್ಷೆ ಗದ್ದುಗೆಯನ್ನು ಏರಿದ್ದ ಶಾಲೆಟ್ ಪಿಂಟೋ ಅವರು ಕಾಂಗ್ರೆಸ್ಸಿನಿಂದ ಸ್ಪರ್ಧಿಸುವ ಮೂಲಕ ತ್ರಿಕೋನ ಸ್ಪರ್ದೆ ಏರ್ಪಟ್ಟಿತ್ತು. ಆದರೆ ಸುಚರಿತ ಶೆಟ್ಟಿ ಅವರ ಹಿಂದಿನ ಸಾಧನೆ ಸಹಿತ ಬಿಜೆಪಿ ಪಕ್ಷದ ನಾಯಕರುಗಳ ಮತ ಪ್ರಚಾರದ ಅಬ್ಬರದೊಂದಿಗೆ ಬಿಜೆಪಿಯ ಸುನೀತಾ ಸುಚರಿತ ಶೆಟ್ಟಿ ಅವರು ಅಧಿಕ ಮತಗಳೊಂದಿಗೆ ಪುತ್ತಿಗೆ ಜಿ.ಪಂ ಕ್ಷೇತ್ರದಲ್ಲಿ ಕಮಲದ ಹೂವನ್ನು ಅರಳಿಸಿದರು. ಇದೀಗ ಮತ್ತೆ ಕಳೆದ ಬಾರಿಯ ಮನೆಯಿಂದಲೇ ಬಿಜೆಪಿಯು ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ ಅದರಂತೆ ಕೆ.ಪಿ ಸುಚರಿತ ಶೆಟ್ಟಿ ಇದೀಗ ಬಿಜೆಪಿ ಅಭ್ಯರ್ಥಿ. ಮೂಲತ: ಜೆಡಿಎಸ್ ಪಕ್ಷದವರಾಗಿದ್ದು ಕಳೆದ 5 ವರ್ಷಗಳ ಹಿಂದೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡವರು. ರಾಜಕೀಯದಲ್ಲಿ ಅತೀ ಹೆಚ್ಚಿನ ಅನುಭವವನ್ನು ಹೊಂದಿದವರು. ಕಾಲೇಜು ದಿನಗಳಿಂದಲೇ ನಾಯಕತ್ವದ ಗುಣಗಳನ್ನು ಹೊಂದಿದ್ದ ಅವರು ಸಮಾಜ ಸೇವೆ, ಕೃಷಿ, ಹೈನುಗಾರಿಕೆ ಹಾಗೂ ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಧನೆ ಮಾಡಿದವರು.
ಪಾಲಡ್ಕ ಗ್ರಾ.ಪಂನಲ್ಲಿ ಕಳೆದ ಹಲವು ವರ್ಷಗಳಿಂದ ಸದಸ್ಯ ಅಧ್ಯಕ್ಷರಾಗಿ ಗದ್ದುಗೆಯನ್ನು ಏರಿ ಜನಪರ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು. ನಂತರ ಜಿ.ಪಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು ತನ್ನ ಅವಧಿಯಲ್ಲಿ ಮಂಗಳೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್‌ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದವರು ಇವರ ಅವಧಿಯಲ್ಲಿಯೇ ಅತೀ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಗಮನಾರ್ಹವಾಗಿದೆ. 10 ವರ್ಷಗಳ ಹಿಂದೆ ಪುತ್ತಿಗೆ ಜಿ.ಪಂ ಕ್ಷೇತ್ರದಲ್ಲಿ ಕಾಂಗ್ರೆಸಿನಿಂದ ಸ್ಪರ್ಧಿಸಿ ವಿಜೇತರಾಗಿದ್ದ ಸಾಧು ಸನಿಲ್ ಅವರ ಪುತ್ರ, ಹೊಸಬೆಟ್ಟು ಗ್ರಾ.ಪಂನಲ್ಲಿ ಸದಸ್ಯನಾಗಿ, ಅಧ್ಯಕ್ಷನಾಗಿ ರಾಜಕೀಯದ ಅನುಭವವನ್ನು ಹೊಂದಿರುವ, ಗ್ರಾಮದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತಿರುವ ಚಂದ್ರಹಾಸ ಸನಿಲ್ ಅವರು ಅಖಾಡದಲ್ಲಿದ್ದಾರೆ. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರ ಪಾಳಯದಲ್ಲಿ ರಾಜಕೀಯದ ಬಗ್ಗೆ ತಿಳಿದುಕೊಂಡಿರುವ, ಈಗಾಗಲೇ ಹೊಸಬೆಟ್ಟು ಗ್ರಾ.ಪಂನಲ್ಲಿ ಕಳೆದ ಕೆಲವು ವರ್ಷಗಳಿಂದ ಸದಸ್ಯನಾಗಿರುವ ಜೆಡಿಎಸ್‌ನ ಅಭ್ಯರ್ಥಿ ತೋಡಾರು ದಿವಾಕರ ಶೆಟ್ಟಿ ಅವರು ಕಣದಲ್ಲಿದ್ದು ಈ ಮೂವರಿಗೆ ಪೈಪೋಟಿ ನೀಡಲು ಸಿಪಿಐಎಂ ಬೆಂಬಲಿತ ಯಾದವ ಶೆಟ್ಟಿ ಅವರಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮೀಣ ಅಭಿವೃದ್ಧಿ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿರುವ ಯಾದವ ಶೆಟ್ಟಿ ಅವರು ಈ ಹಿಂದೆ ಉಳ್ಳಾಲ ವಿಧಾನ ಸಭಾ ಚುನಾವಣೆ ಹಾಗೂ ಕಳೆದ ಬಾರಿ ಮಂಗಳೂರು ಸಂಸತ್ ಚುನಾವಣೆಯಲ್ಲಿ ಸಿಪಿಐಎಂ ಪಕ್ಷದ ಬೆಂಬಲದೊಂದಿಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಸಿಪಿಐಎಂ ಸಂಘಟನೆಯನ್ನು ಕಟ್ಟಿಕೊಂಡು, ಬೀಡಿ, ಕಟ್ಟಡ, ಕೂಲಿ ಸಹಿತ ಬಡವರ್ಗದ ಜನರ ಏಳಿಗೆಗಾಗಿ ಮತ್ತು ಸರಕಾರದ ಯೋಜನೆಗಳು ಬಡವರಿಗೆ ತಲುಪುವಂತೆ ಸರಕಾರದ ವಿರುದ್ಧ ಹೋರಾಟವನ್ನು ಮಾಡುವವರು. ಮಂಡಲ ಪಂಚಾಯತ್‌ನಲ್ಲಿ 3 ಬಾರಿ ಸದಸ್ಯನಾಗಿ ಅನುಭವವನ್ನು ಹೊಂದಿದವರಲ್ಲದೆ ಜನ ಸಾಮಾನ್ಯರಿಗೆ ಇವರು ಪರಿಚಯದ ಮುಖವಾಗಿರುವುದರಿಂದ ಇವರೂ ಕೂಡಾ ಉಳಿದ ಸ್ಪರ್ಧಿಗಳಿಗೆ ಪೈಪೋಟಿ ನೀಡಲಿದ್ದಾರೆ.
ಪುತ್ತಿಗೆ ಜಿ.ಪಂ ಕ್ಷೇತ್ರವು ಪುತ್ತಿಗೆ, ತೆಂಕಮಿಜಾರು, ಹೊಸಬೆಟ್ಟು, ಇರುವೈಲು, ಪಾಲಡ್ಕ ಗ್ರಾ,ಪಂಗಳನ್ನು ಹೊಂದಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಶಿಕ್ಷಣ ಸಂಸ್ಥೆ, ಮೂರು ಇಂಜಿನಿಯರ್ ಕಾಲೇಜುಗಳು ಸೇರಿದಂತೆ ಅಭಿವೃದ್ಧಿಯ ಪಥದಲ್ಲಿ ಈ ಕ್ಷೇತ್ರವು ದಾಪುಗಾಲನ್ನಿಡುತ್ತಿದೆ. ನಮ್ಮ ಗ್ರಾಮ-ನಮ್ಮ ರಸ್ತೆಯ ಮೂಲಕ ರಸ್ತೆಗಳ ಅಭಿವೃದ್ಧಿಯಾಗಿದ್ದರೂ ಪುತ್ತಿಗೆ ಶ್ರೀ ಸೋಮನಾಥೇಶ್ವರದ ಬಳಿ ಹಾದು ಹೋಗುವ ರಸ್ತೆ, ಮಾಸ್ತಿಕಟ್ಟೆ-ವನಭೋಜನದ ಕಡೆಗೆ ಹೋಗುವ ರಸ್ತೆಯು ದುರಸ್ಥಿಯನ್ನು ಕಾಣದೆ ಅನಾರೋಗ್ಯವನ್ನು ಹೊಂದಿದೆ. ಸ್ವಚ್ಛತೆಗೆ ಆದ್ಯತೆ ನೀಡದ ಪಂಚಾಯತ್‌ಗಳು : ಪುತ್ತಿಗೆ ಜಿ.ಪಂ ಕ್ಷೇತ್ರದಲ್ಲಿರುವ ತೆಂಕಮಿಜಾರು ಗ್ರಾ.ಪಂ ಸ್ವಚ್ಛತೆ ಸಹಿತ ಇತರ ಅಭಿವೃದ್ಧಿ ಕಾರ್ಯಗಳಲ್ಲಿ ರಾಜ್ಯ ಮಾದರಿಯಾಗಿದೆ. ಆದರೆ ಉಳಿದಂತೆ ಪುತ್ತಿಗೆ ಪಂಚಾಯತ್, ಹೊಸಬೆಟ್ಟು, ಪಾಲಡ್ಕ ಪಂಚಾಯತ್‌ಗಳು ಸ್ವಚ್ಛತೆಗೆ ಆದ್ಯತೆ ನೀಡದೆ ಕಸದ ರಾಶಿಗಳು ರಸ್ತೆಗಳಲ್ಲಿ ಸ್ವಾಗತ ನೀಡುತ್ತಿರುತ್ತವೆ. ಅಲ್ಲದೆ ಕೆಲವು ಪಂಚಾಯತ್‌ಗಳ್ಲಿ ಆದಾಯವಿದ್ದರೂ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆಯಲ್ಲದೆ ತೆರಿಗೆಯ ಬಿಲ್ಲುಗಳು ಸರಿಯಾಗಿ ಪಂಚಾಯತ್‌ಗೆ ಪಾವತಿಯಾಗಲು ಬಾಕಿ ಇರುತ್ತವೆ. ನೀರಿನ ಸಮಸ್ಯೆಗಳು, ಮನೆ ನಿವೇಶನ, ಹಕ್ಕುಪತ್ರ ಸಹಿತ ಕೆಲವು ಸಮಸ್ಯೆಗಳಿದ್ದು ಈ ಎಲ್ಲಾ ಸಮಸ್ಯೆಗಳನ್ನು ಯಾರು ಪರಿಹರಿಸಲು ಸಾಮರ್ಥ್ಯವನ್ನು ಹೊಂದಿದ್ದಾರೆಯೋ ಆ ಅಭ್ಯರ್ಥಿಗಳನ್ನು ಈ ಕ್ಷೇತ್ರದ ಮತದಾರರು ಆಯ್ಕೆ ಮಾಡುವ ಉದ್ದೇಶವನ್ನು ಹೊಂದಿದ್ದು, ಕೊನೆಯಲ್ಲಿ ಯಾವ ಅಭ್ಯರ್ಥಿಯ ಕಡೆಗೆ ಜನರ ಒಲವು ಇದೆ ಎಂಬುದನ್ನು ಫಲಿತಾಂಶ ಬಂದ ಮೇಲಷ್ಟೇ ತಿಳಿಯಬಹುದಾಗಿದೆ.







