ಮಂಗಳೂರು : ಅಪಘಾತ ಸಂತ್ರಸ್ತರಿಗೆ ಮೊಯಿದಿನ್ ಬಾವ ಅವರಿಂದ ಚೆಕ್ ಹಸ್ತಾಂತರ

ಮಂಗಳೂರು,ಫೆ.15: ವಾರದ ಹಿಂದೆ ಬೈಕಂಪಾಡಿ ಸೇತುವೆಯ ಬಳಿ ಅಪಘಾತಕ್ಕೊಳಗಾಗಿ ನದಿಗೆ ಬಿದ್ದು ಸಾವನ್ನಪ್ಪಿದ ನವೀನ್‌ರೈ ಎಂಬವರ ತಾಯಿ ಸರೋಜಿನಿ ಶೆಟ್ಟಿಯವರಿಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರ ಸಂಸ್ಥೆ ರಾಜ್‌ದೀಪ್ ಬಿಲ್ಕಾನ್ ಮಾನವೀಯ ನೆಲೆಯಲ್ಲಿ ನೀಡಿರುವ ರೂ.2.5 ಲಕ್ಷ ದ ಚೆಕ್ ಅನ್ನು ಶಾಸಕ ಮೊಯಿದಿನ್ ಬಾವ ಅಪಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ತೇಜಸ್ವಿನಿ ಆಸ್ಪತ್ರೆಯಲ್ಲಿ ಇಂದು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದ್ದು ಈ ಹಿನ್ನೆಲೆಯಲ್ಲಿ ತಾನು ಹೆದ್ದಾರಿ ಇಲಾಖೆ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರ ಸಂಸ್ಥೆಯಲ್ಲಿ 5 ಲಕ್ಷ ರೂ ಪರಿಹಾರ ನೀಡಬೇಕೆಂಬ ಆಗ್ರಹ ಮಾಡಿದ್ದೆ. ಗುತ್ತಿಗೆದಾರ ಸಂಸ್ಥೆಯವರು 2.5 ಲಕ್ಷ ಮಂಜೂರು ಮಾಡಿದ್ದಾರೆ ಎಂದು ಹೇಳಿದರು.
ತನ್ನ ಕಾರು ಅಪಘಾತವಾಗಲು ಎಂಸಿಎಫ್ ಅಜಾಗರೂಕತೆ ಕಾರಣವಾಗಿದ್ದು ರಾಷ್ಟ್ರೀಯ ಹೆದ್ದಾರಿಗೆ ಅವೈಜ್ಷಾನಿಕ ರೀತಿಯಲ್ಲಿ ಹಾಕುತ್ತಿರುವ ಗೇಟ್‌ನ ಪರಿಣಾಮ ಅಪಘಾತ ಸಂಭವಿಸಿದೆ. ಎಂಸಿಎಫ್ ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸಲು ಇರುವ ಅಧಿಕಾರದ ಬಗ್ಗೆ ಪರಿಶೀಲನೆಗೆ ಸೂಚಿಸಿದ್ದೇನೆ. ಈ ಅಪಘಾತ ಸಂಭವಿಸಿದ ನಂತರ ಆ ಪ್ರದೇಶದಲ್ಲಿ ಸಿಗ್ನಲ್ ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿಂದೆಯೂ ಹಲವು ಅಪಘಾತಗಳು ಸಂಭವಿಸಿರುವ ಬಗ್ಗೆ ಮಾಹಿತಿ ಬಂದಿದ್ದು ಎಂಸಿಎಫ್ ವಿರುದ್ದ ಕಾನೂನುಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಅಪಘಾತ ಸಂಭವಿಸಿ ಚಿಕಿತ್ಸೆ ಪಡೆಯುತ್ತಿರುವ ಪರಿಣಾಮ ಜಿ.ಪಂ, ತಾ.ಪಂ ಚುನಾವಣಾ ಪ್ರಚಾರ ನಡೆಸಲು ಸಾಧ್ಯವಾಗುತ್ತಿಲ್ಲ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮೂರು ಜಿ.ಪಂ ಮತ್ತು 9 ತಾ.ಪಂ ಕ್ಷೇತ್ರಗಳಲ್ಲಿ 160 ಕೋಟಿ ವೆಚ್ದಲ್ಲಿ ಅಭಿವೃದ್ದಿ ಕಾರ್ಯ ನಡೆದಿದದೆ. ಮೂರು ಜಿಲ್ಲಾ ಪಂಚಾಯತ್ ಮತ್ತು 9ರಲ್ಲಿ 8 ತಾ.ಪಂ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಕೇತ್ರದ ಜಿ.ಪಂ ಮತ್ತು ತಾ.ಪಂ ಚುನಾವಣೆಯ ಪ್ರಚಾರದ ಸಿಡಿಯನ್ನು ಗುರುಪುರ ಹೋಬಳಿಯ ಪಕ್ಷಿನೋಟವನ್ನು ಅವರು ಬಿಡುಗಡೆಗೊಳಿಸಿದರು.








