ಜೆಎನ್‌ಯುದ ಉನ್ನತ ಪರಂಪರೆಗೆ ಮಸಿ ಬಳಿಯುವ ಯತ್ನ:ಅಗ್ನಿವೇಶ್

ಭೋಪಾಲ,ಫೆ.15: ಕ್ಯಾಂಪಸ್ ಚುನಾವಣೆಗಳಲ್ಲಿ ತಮ್ಮ ವಿದ್ಯಾರ್ಥಿ ಘಟಕ ಪರಾಭವಗೊಂಡಿರುವ ಹಿನ್ನೆಲೆಯಲ್ಲಿ ಎಬಿವಿಪಿ,ಆರೆಸ್ಸೆಸ್ ಮತ್ತು ಬಿಜೆಪಿ ಜೆಎನ್‌ಯುದ ಉನ್ನತ ಪರಂಪರೆಗಳಿಗೆ ಮಸಿ ಬಳಿಯುವ ಪ್ರಯತ್ನಗಳಲ್ಲಿ ತೊಡಗಿವೆ ಎಂದು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ ಅವರು ಸೋಮವಾರ ಇಲ್ಲಿ ಆರೋಪಿಸಿದರು. ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯಾ ಕುಮಾರ್ ಎದುರು ಎಬಿವಿಪಿ ಮಣ್ಣು ಮುಕ್ಕಿರುವುದರಿಂದ ನಡೆಯುತ್ತಿರುವ ಈ ಪ್ರಯತ್ನಗಳು ತೀವ್ರ ಖಂಡನೀಯವಾಗಿವೆ ಎಂದ ಅವರು, ಇದು ಸಂಪೂರ್ಣ ತಪ್ಪು ಕೆಲಸವಾಗಿದ್ದು, ಇಂತಹ ಕೊಳಕು ಕೃತ್ಯಗಳಿಗೆ ರಾಜಕೀಯದಲ್ಲಿ ಆಸ್ಪದವಿರಬಾರದು ಎಂದರು.
ಹೈದ್ರಾಬಾದ್ ಕೇಂದ್ರೀಯ ವಿವಿಯಲ್ಲಿ ನಡೆದ ಘಟನೆಯನ್ನು ಪುನರಾವರ್ತಿಸಲಾಗುತ್ತಿದೆ. ಪ್ರಮುಖ ಹುದ್ದೆಗಳಲ್ಲಿ ಆರೆಸ್ಸೆಸ್-ಬಿಜಿಪಿ ವ್ಯಕ್ತಿಗಳನ್ನು ಪ್ರತಿಷ್ಠಾಪಿಸಲು ಸರಕಾರವು ಅನಗತ್ಯವಾಗಿ ಅವಸರಿಸುತ್ತಿದೆ. ತನ್ನ ಸ್ವಂತ ಹಿತಾಸಕ್ತಿಗಳ ಈಡೇರಿಕೆಗಾಗಿ ಅದು ಹೀಗೆ ಮಾಡುತ್ತಿರಬಹುದು. ಇದು ದೇಶದ ಬೌದ್ಧಿಕ ಪರಂಪರೆಯ ಮೇಲಿನ ದೊಡ್ಡ ದಾಳಿಯಾಗಿದ್ದು, ಈ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕಾಗಿದೆ ಎಂದು ಅವರು ಆರೋಪಿಸಿದರು.
ಜೆಎನ್‌ಯು ಕ್ಯಾಂಪಸ್‌ನಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಅವರು ಖಂಡಿಸಿದರಾದರೂ, ಕುಲಪತಿಗಳು ರಚಿಸಿದ್ದ ಸಮಿತಿಯು ತನ್ನ ವರದಿಯನ್ನು ಸಲ್ಲಿಸುವ ಮೊದಲೇ ಕನ್ಹಯಾರನ್ನು ಬಂಧಿಸಿದ್ದು ತಪು ಎಂದು ಪ್ರತಿಪಾದಿಸಿದರು.
ಸಂಸತ್ ದಾಳಿಯ ಅಪರಾಧಿ ಅಫ್ಝಲ್ ಗುರುವಿನ ಬಗ್ಗೆ ಜೆಎನ್‌ಯು ವಿದ್ಯಾರ್ಥಿಗಳು ಏನನ್ನಾದರೂ ಹೇಳಿದ್ದಿರಬಹುದು. ಆದರೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಉತ್ಕರ್ಷವನ್ನು ತಡೆಯುವ ತನ್ನ ವಿಫಲ ಪ್ರಯತ್ನದಲ್ಲಿ ಯುಪಿಎ ಸರಕಾರವು ಗುರುವನ್ನು ಬಲಿಪಶುವನ್ನಾಗಿಸಿತ್ತು ಎಂದು ಪಿಡಿಪಿ ನಾಯಕರು ಹೇಳಿದ್ದನ್ನು ಜನತೆ ಮರೆಯಬಾರದು. ಆದ್ದರಿಂದ ಪಿಡಿಪಿ ವಿರುದ್ಧವೂ ದೇಶದ್ರೋಹ ಪ್ರಕರಣವನ್ನು ದಾಖಲಿಸಬೇಕು ಎಂದು ಅಗ್ನಿವೇಶ ಹೇಳಿದರು.







