ಇಸ್ರೇಲ್ ಕಂಪೆನಿಗಳ ಉತ್ಪನ್ನಕ್ಕೆ ಬಹಿಷ್ಕಾರ ನಿಷೇಧ - ಬ್ರಿಟನ್‌ನಲ್ಲಿ ವಿವಾದಾತ್ಮಕ ಕಾನೂನು ಜಾರಿಗೆ ಕ್ಷಣಗಣನೆ
ಸಚಿವರ ಇಸ್ರೇಲ್ ಭೇಟಿಯ ವೇಳೆ ಘೋಷಣೆ ನಿರೀಕ್ಷೆ

ಲಂಡನ್, ಫೆ. 15: ಇನ್ನು ಮುಂದೆ ಬ್ರಿಟನ್‌ನ ಸ್ಥಳೀಯ ಸಂಸ್ಥೆಗಳು, ಸರಕಾರಿ ಸಂಸ್ಥೆಗಳು ಮತ್ತು ಕೆಲವು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿ ಸಂಘಟನೆಗಳೂ ‘‘ವೌಲ್ಯವಿಹೀನ’’ ಕಂಪೆನಿಗಳ ಉತ್ಪನ್ನಗಳನ್ನು ಬಹಿಷ್ಕರಿಸುವಂತಿಲ್ಲ. ಇದಕ್ಕೆ ಸಂಬಂಧಿಸಿ ಬ್ರಿಟನ್ ಸರಕಾರ ವಿವಾದಾಸ್ಪದ ಕಾನೂನೊಂದನ್ನು ಜಾರಿಗೊಳಿಸಿದೆ.
ಈ ಕಾನೂನಿನ ಪ್ರಕಾರ, ಶಸ್ತ್ರಾಸ್ತ್ರ ವ್ಯಾಪಾರ, ಭೂಮಿಯಡಿಯ ತೈಲ, ತಂಬಾಕು ಉತ್ಪನ್ನಗಳು ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿನ ಇಸ್ರೇಲ್ ವಸಾಹತುಗಳೊಂದಿಗೆ ಶಾಮೀಲಾಗಿರುವ ಕಂಪೆನಿಗಳ ಉತ್ಪನ್ನಗಳು ಮತ್ತು ಸೇವೆಗಳನ್ನು ನಿರಾಕರಿಸುವ ಸ್ವಾತಂತ್ರವನ್ನು ಸರಕಾರಿ ಅನುದಾನ ಪಡೆಯುವ ಸಂಸ್ಥೆಗಳು ಕಳೆದುಕೊಳ್ಳಲಿವೆ.
ಬಹಿಷ್ಕಾರವನ್ನು ಮುಂದುವರಿಸುವ ಯಾವುದೇ ಸರಕಾರಿ ಸಂಸ್ಥೆಯು ‘‘ಭಾರೀ ಪ್ರಮಾಣದ ದಂಡ’’ಕ್ಕೆ ಒಳಪಡುವುದು ಎಂದು ಸರಕಾರ ಎಚ್ಚರಿಸಿದೆ.
ಟೌನ್-ಹಾಲ್ ಬಹಿಷ್ಕಾರದ ವಿರುದ್ಧ ತಾವು ಕಾರ್ಯಾಚರಿಸುತ್ತಿರುವುದಾಗಿ ಹಿರಿಯ ಸರಕಾರಿ ಅಧಿಕಾರಿಗಳು ಹೇಳಿದ್ದಾರೆ. ಈ ಬಹಿಷ್ಕಾರ ಸಮುದಾಯಗಳ ನಡುವಿನ ಬಾಂಧವ್ಯವನ್ನು ಹಾಳು ಮಾಡಿದೆ, ಧ್ರುವೀಕರಣಕ್ಕೆ ಎಡೆಮಾಡಿಕೊಟ್ಟಿದೆ ಹಾಗೂ ಯಹೂದಿ ವಿರೋಧಿ ಭಾವನೆಗಳಿಗೆ ಕಾರಣವಾಗಿದೆ ಎಂದಿದ್ದಾರೆ.
ಆದರೆ, ಸರಕಾರದ ಈ ಕ್ರಮ ‘‘ಪ್ರಜಾತಾಂತ್ರಿಕ ಸ್ವಾತಂತ್ರದ ಮೇಲಿನ ಭೀಕರ ದಾಳಿ’’ ಎಂಬುದಾಗಿ ಟೀಕಾಕಾರರು ಬಣ್ಣಿಸಿದ್ದಾರೆ.
ಈ ಬಹಿಷ್ಕಾರ ನಿಷೇಧ ಘೋಷಣೆಯನ್ನು ಈ ವಾರದ ಇಸ್ರೇಲ್ ಭೇಟಿಯ ವೇಳೆ ಕ್ಯಾಬಿನೆಟ್ ಕಚೇರಿ ಸಚಿವ ಮ್ಯಾಟ್ ಹ್ಯಾನ್‌ಕಾಕ್ ಮಾಡಲಿರುವುದು ವಿಶೇಷವಾಗಿದೆ. ಈ ಮೂಲಕ, ಈ ನಿಷೇಧದ ಪ್ರಮುಖ ಉದ್ದೇಶವೇನು ಎನ್ನುವುದೂ ಸ್ಪಷ್ಟವಾಗಿದೆ.
ಇಸ್ರೇಲ್ ಕಂಪೆನಿಗಳು ಮತ್ತು ಆಕ್ರಮಿಕ ಪಶ್ಚಿಮ ದಂಡೆಯಲ್ಲಿ ಬಂಡವಾಳವನ್ನು ಹೂಡಿರುವ ಕಂಪೆನಿಗಳ ಉತ್ಪನ್ನಗಳಿಗೆ ಬ್ರಿಟನ್‌ನಲ್ಲಿ ಹಿಂದಿನಿಂದಲೂ ಅನಧಿಕೃತ ಬಹಿಷ್ಕಾರ ವಿಧಿಸಲಾಗಿರುವುದನ್ನು ಸ್ಮರಿಸಬಹುದಾಗಿದೆ.
ಪ್ರಜಾಸತ್ತೆಯ ಮೇಲಿನ ದಾಳಿ
ವಿವಾದಾಸ್ಪದ ಕಾನೂನನ್ನು ಬ್ರಿಟನ್‌ನ ಪ್ರತಿಪಕ್ಷಗಳು ಟೀಕಿಸಿವೆ. ಕಾನೂನು ಪ್ರಜಾಸತ್ತೆಯ ಮೇಲಿನ ದಾಳಿ ಎಂಬುದಾಗಿ ಅವು ಬಣ್ಣಿಸಿವೆ.
ಬ್ರಿಟನ್‌ನ ಲೇಬರ್ ಪಕ್ಷದ ನಾಯಕ ಜೆರಮಿ ಕಾರ್ಬಿನ್‌ರ ವಕ್ತಾರರು ಹೀಗೆ ಹೇಳುತ್ತಾರೆ: ‘‘ತಾವು ಅನೈತಿಕವೆಂದು ಭಾವಿಸುವ ವ್ಯಾಪಾರ ಅಥವಾ ಹೂಡಿಕೆಗಳಿಂದ ಬಂಡವಾಳವನ್ನು ಹಿಂದಕ್ಕೆ ಪಡೆಯುವ ಸ್ಥಳೀಯ ಸಂಸ್ಥೆಗಳು ಮತ್ತು ಇತರ ಸರಕಾರಿ ಸಂಸ್ಥೆಗಳ ಅಧಿಕಾರವನ್ನು ನಿಷೇಧಿಸುವ ಸರಕಾರದ ನಿರ್ಧಾರ ಸ್ಥಳೀಯ ಪ್ರಜಾಸತ್ತೆಯ ಮೇಲಿನ ದಾಳಿಯಾಗಿದೆ’’.
‘‘ಕೇಂದ್ರ ಸರಕಾರದ ರಾಜಕೀಯ ನಿಯಂತ್ರಣದಿಂದ ಮುಕ್ತವಾರ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿರುವ ಸ್ಥಳೀಯ ಪ್ರತಿನಿಧಿಗಳನ್ನು ಆರಿಸುವ ಹಕ್ಕನ್ನು ಜನರು ಹೊಂದಿದ್ದಾರೆ. ವೌಲ್ಯ ಮತ್ತು ಮಾನವಹಕ್ಕುಗಳ ಆಧಾರದಲ್ಲಿ ಬಂಡವಾಳವನ್ನು ಅಥವಾ ಖರೀದಿಯನ್ನು ಹಿಂದಕ್ಕೆ ಪಡೆಯುವ ಸ್ವಾತಂತ್ರವೂ ಅದರಲ್ಲಿ ಸೇರಿದೆ’’ ಎಂದಿದ್ದಾರೆ.







