ರಾಜ್ಯದಲ್ಲಿರುವ ಕೆಟ್ಟ ಸರಕಾರದ ಬಗ್ಗೆ ಜನ ರೋಸಿ ಹೋಗಿರುವುದು ಸ್ಪಷ್ಟವಾಗಿದೆ-ವಿಧಾನ ಪರಿಷತ್ ಸದಸ್ಯಗಣೇಶ್ ಕಾರ್ನಿಕ್

ಬೆಳ್ತಂಗಡಿ: ಭಾರತೀಯ ಜನತಾ ಪಕ್ಷ ಈಗಾಗಲೇ ಒಂದು ಸುತ್ತಿನ ಪ್ರಚಾರಕಾರ್ಯವನ್ನು ಮುಗಿಸಿದ್ದು ಎರಡನೇ ಸುತ್ತಿನಲ್ಲಿ ಮನೆ ಮನೆ ಭೇಟಿಕಾರ್ಯ ನಡೆಯುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಪಕ್ಷಕ್ಕೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಮತದಾರರು ಬೆಂಬಲ, ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿರುವ ಕೆಟ್ಟ ಸರಕಾರದ ಬಗ್ಗೆ ಜನ ರೋಸಿ ಹೋಗಿರುವುದು ಸ್ಪಷ್ಟವಾಗಿದೆ ಎಂದು ವಿಧಾನ ಪರಿಷತ್ ಸದಸ್ಯಗಣೇಶ್ ಕಾರ್ನಿಕ್ ಹೇಳಿದರು.
ಅವರು ಸೋಮವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಸಿದ್ದರಾಮಯ್ಯ ಸರಕಾರ ರೈತರ ಕುಮ್ಕಿ ಜಾಗವನ್ನು ಕಸಿದುಕೊಳ್ಳಲು ಹೊರಟಿದೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ನಡೆಸುವಾಗ ಕುಮ್ಕಿ ವಿಚಾರದಲ್ಲಿ ಅದರ ಹಕ್ಕಿನ ಪರವಾಗಿ ಪ್ರಯತ್ನ ಮಾಡಿತ್ತಲ್ಲದೆ ಕುಮ್ಕಿ ಜಮೀನು ಮಂಜೂರಾತಿ ನಿಯಮ ಪತ್ರಕವನ್ನುರಾಜ್ಯಪಾಲರ ಸಹಿಗಾಗಿ ಕಳುಹಿಸಲಾಗಿತ್ತು. ಆದರೆ ಸರಕಾರದ ಅವಧಿ ಮುಗಿದುದರಿಂದ ಅದು ಸಾಧ್ಯವಾಗದೇ ಹೋಯಿತು. ಪಕ್ಷ ಕುಮ್ಕಿ ಹಕ್ಕಿನ ಪರವಾಗಿದೆ.ಪಕ್ಷ ಹೋರಾಟ ಮಾಡಿ ಹಕ್ಕನ್ನುಕೊಡಿಸಲು ಬದ್ಧವಾಗಿದೆ ಎಂದರು. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಕ್ಷೇತ್ರದಲ್ಲಿ ತುಳಸಿ ಹಾರಬೆಯವರು ಸ್ಪರ್ದೆಯಿಂದ ನಿವೃತ್ತಿ ಘೋಷಿಸಿದ್ದಾರಲ್ಲದೆ ಮುಂದಿನ ದಿನಗಳಲ್ಲಿ ನಮ್ಮೊಟ್ಟಿಗೇ ಇರಲಿದ್ದಾರೆ. ತಾ.ಪಂ. ಜಿ.ಪಂ. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವೃದ್ಧಿಸಿದೆ ಎಂದರು. ಗೋಷ್ಠಿಯಲ್ಲಿ ಪಕ್ಷದ ಮಂಡಲ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಂಜನ್ ಗೌಡ, ತುಳಸೀ ಹಾರಬೆ, ನಂದಕುಮಾರ್, ಸಂಪತ್ ಕುಮಾರ್ ಇದ್ದರು.
ಕುವೆಟ್ಟು ಜಿ.ಪಂ. ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೇಟು ಸಿಗದ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಸ್ಪರ್ಧಾಕಣದಲ್ಲಿದ್ದ ಮಾಜಿ ಸದಸ್ಯೆ ತುಳಸಿ ಜಿ. ಹಾರಬೆ ಅವರು ಬಿಜೆಪಿ ಅಭ್ಯರ್ಥಿ ಮಮತಾ ಎಂ.ಶೆಟ್ಟಿಯವರಿಗೆ ಬೆಂಬಲ ಸೂಚಿಸಿ ಸ್ಪರ್ಧೆಯಿಂದ ನಿವೃತ್ತಿ ಘೋಷಿಸಿರುವುದನ್ನು ತಿಳಿಸಿದ್ದಾರೆ.
ಚುನಾವಣೆ ಅಧಿಸೂಚನೆ ಪ್ರಕಟವಾದ ಬಳಕ ಪಕ್ಷದಿಂದ ಅವಕಾಶ ದೊರಕಬಹುದೆಂಬ ನಿರೀಕ್ಷೆಯಿಂದ ನಾನು ನಾಮ ಪತ್ರ ಸಲ್ಲಿಸಿದೆ. ಕಾರಣಾಂತರದಿಂದ ನಾಮಪತ್ರ ಹಿಂಪಡೆಯಲು ಸಾಧ್ಯವಾಗಲಿಲ್ಲ ನನ್ನ ಸ್ಪರ್ಧೆಯಿಂದ ಕಾರ್ಯಕರ್ತರಲ್ಲಿ ಗೊಂದಲವುಂಟಾಗಬಾರದೆಂಬ ಸದಾಶಯದಿಂದ ಪಕ್ಷದ ಅಧಿಕೃತ ಅಭ್ಯರ್ಥಿಗೆ ಬೆಂಬಲ ಸೂಚಿಸಿ ಸ್ಪರ್ಧಾಕಣದಿಂದ ನಿವೃತ್ತಿ ಹೊಂದುವುದಾಗಿ ಮುಂದೆಯೂ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲಿರುವುದಾಗಿ ತುಳಸಿ ಹಾರಬೆ ತಿಳಿಸಿದರು.







