ಬೆಳ್ತಂಗಡಿ : ಬಹಿಷ್ಕಾರವನ್ನು ಹಿಂತೆಗೆದು, ಮುಕ್ತ ಚುನಾವಣೆಗೆ ಅವಕಾಶ

ಬೆಳ್ತಂಗಡಿ: ಗ್ರಾಮದಲ್ಲಿ ನಡೆಯದ ಅಭಿವೃದ್ದಿಕಾರ್ಯಗಳ ಬಗ್ಗೆ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದ ತಣ್ಣಿರುಪಂತ ಗ್ರಾಮದ ಪಾಲೇದು ಅಭಿವೃದ್ದಿ ಸಮಿತಿಯವರು ತಮ್ಮ ನಿರ್ಧಾರದಿಂದ ಹಿಂದೆಸರಿದಿದ್ದಾರೆ.
ಈ ವಿಚಾರವನ್ನು ಸಮಿತಿಯವರು ಸೋಮವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರಕಟಿಸಿದರು. ಕಳೆದ ಜ.11ರಂದು ಪಾಲೇದಿನಲ್ಲಿ ಗ್ರಾಮಸ್ಥರಿಂದ ಮೂಲಭೂತ ಸೌಕರ್ಯಗಳ ಬೇಡಿಕೆಗಾಗಿ ಈ ಬಾರಿಯ ತಾ.ಪಂ. ಜಿ.ಪಂ. ಚುನಾವಣೆಯನ್ನು ಬಹಿಷ್ಕರಿಸುವುದಾಗಿ ನಿರ್ಧರಿಸಿ ಪ್ರತಿಭಟನೆಯನ್ನು ನಡೆಸಲಾಗಿತ್ತು. ಈ ಪ್ರತಿಭಟನೆಯ ನಂತರ ಸಂಸದ ನಳೀನ್ ಕುಮಾರ್‌ಕಟೀಲು, ಶಾಸಕರಾದ ವಸಂತ ಬಂಗೇರ, ಕೋಟ ಶ್ರೀನಿವಾಸ ಪೂಜಾರಿ ಅವರುಗಳು ಭೇಟಿ ನೀಡಿ ಸೂಕ್ತ ಭರವಸೆ ನೀಡಿರುವುದರಿಂದ ಮತ್ತು ಅವರುಗಳ ಭರವಸೆಯಲ್ಲಿ ನಂಬಿಕೆ ಇಟ್ಟು ಬಹಿಷ್ಕಾರವನ್ನು ಹಿಂತೆಗೆಯುವುದಾಗಿ ಮತ್ತು ಮುಕ್ತ ಚುನಾವಣೆಗೆ ಅವಕಾಶ ಮಾಡಿಕೊಡುವುದಾಗಿ ಗ್ರಾಮಸ್ಥರು ತೀರ್ಮಾನಿಸಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಶ್ಯಾಂ, ಉಪಾಧ್ಯಕ್ಷರಾದ ಹರಿಪ್ರಸಾದ್, ಲತೀಫ್, ಮಾಧವ, ಕಾರ್ಯದರ್ಶಿಗಳಾದ ಅನಿಲ್ ಪಾಲೇದು, ದಿನೇಶ್ ನಾಯಕ್, ಲಕ್ಷ್ಮಣ ಇದ್ದರು.





