ಅಂಡರ್-19 ವಿಶ್ವಕಪ್ ಫೈನಲ್ : ಭಾರತ ಸೋತರೂ ಸರ್ಫರಾಝ್ ಹೀರೋ....!

ಮುಂಬೈ, ಫೆ.15: ಸರ್ಫರಾಝ್ ಖಾನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗುರುತಿಸಿಕೊಂಡವರು.ಭಾರತ ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತಸೋತರೂ, 18ರ ಹರೆಯದ ಯುವ ಆಟಗಾರ ಹೀರೋ ಆಗಿ ಹೊರಹೊಮ್ಮಿದ್ದಾರೆ.
2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು.ಐಪಿಎಲ್‌ನಲ್ಲಿ ಅವಕಾಶ ಪಡೆದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು.
ಅಂಡರ್-19 ವಿಶ್ವಕಪ್‌ನಲ್ಲಿ ಸರ್ಫರಾಝ್ ಖಾನ್ ನಿರಾಂತಕಶೈಲಿ, ಉತ್ತಮ ಜೊತೆಯಾಟದ ಮೂಲಕ ಗಮನ ಸೆಳೆದಿದ್ದರು. ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ತಂಡದ ಆಟಗಾರರು ಎದುರಾಳಿ ತಂಡದ ಬೌಲರ್‌ಗಳಿಗೆ ವಿಕೆಟ್ ಒಪ್ಪಿಸಿ ವಾಪಸಾಗುವಾಗ ಸರ್ಫರಾಝ್ ಯಾವುದೇ ಒತ್ತಡಕ್ಕೊಳಗಾಗದೆ ಆಡಿ ಅರ್ಧಶತಕದ ಕೊಡುಗೆ ನೀಡಿದ್ದರು. ಭಾರತ 6.1 ಓವರ್‌ಗಳಲ್ಲಿ 3ವಿಕೆಟ್ ನಷ್ಟದಲ್ಲಿ 27 ರನ್ ಗಳಿಸಿದ್ದಾಗ ಸರ್ಫರಾಝ್ ಕ್ರೀಸ್‌ಗೆ ಆಡಲು ಆಗಮಿಸಿದ್ದರು.
ಒಂದು ಕಡೆ ವಿಕೆಟ್ ಪತನಗೊಳ್ಳುತ್ತಿದ್ದರೂ, ಇನ್ನೊಂದು ತುದಿಯಲ್ಲಿ ಸರ್ಫರಾಝ್ ಕ್ರೀಸ್‌ಗೆ ಅಂಟಿಕೊಂಡು ಆಡಿದರು. 145 ನಿಮಿಷಗಳ ಬ್ಯಾಟಿಂಗ್‌ನಲ್ಲಿ 89 ಎಸೆತಗಳನ್ನು ಎದುರಿಸಿದರು. 5 ಬೌಂಡರಿಮತ್ತು ಒಂದು ಸಿಕ್ಸರ್ ನೆರವಿನಲ್ಲಿ 51 ರನ್ ಗಳಿಸಿದರು.ತಂಡದ ಸ್ಕೋರ್‌ನ್ನು 120ಕ್ಕೆ ಏರಿಸಿ ಔಟಾದರು. ಇವರ ಹೋರಾಟದ ಫಲವಾಗಿ ತಂಡ ನೂರು ರನ್ ಪೂರ್ಣಗೊಳಿಸುವ ಮೊದಲೇ ಆಲೌಟಾಗುವ ಭೀತಿಯಿಂದ ಪಾರಾಗಿತ್ತು.
ಸೆಮಿಫೈನಲ್‌ನಲ್ಲೂ ಚೆನ್ನಾಗಿ ಆಡಿದ್ದರು: ಸರ್ಪರಾಝ್ ಖಾನ್ ಏಳು ಪಂದ್ಯಗಳಲ್ಲಿ ಐದು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಫೈನಲ್‌ನಲ್ಲಿ ಅವರ ಕೊಡುಗೆ ತಂಡವನ್ನು ಸೋಲಿನಿಂದ ಪಾರುಮಾಡಲು ನೆರವಾಗಲಿಲ್ಲ.ಇವರ ನೆರವಿನಲ್ಲಿ ಭಾರತ 45.1 ಓವರ್‌ಗಳಲ್ಲಿ 145 ರನ್ ದಾಖಲಿಸಿತ್ತು. ಭಾರತದ ಸವಾಲನ್ನು ವಿಂಡೀಸ್ ಲಘವಾಗಿ ಪರಿಣಮಿಸಿತು.ವಿಂಡೀಸ್ ಐದು ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿಕೊಂಡಿತು.ಭಾರತ ಈ ಪಂದ್ಯದಲ್ಲಿ ಸೋತರೂ ಸರ್ಫರಾಝ್ ಓರ್ವ ಪ್ರಭುದ್ಧಆಟಗಾರನಾಗಿ ಗಮನಸೆಳೆದರು.
ಸೆಮಿಫೈನಲ್‌ನಲ್ಲಿ ಸರ್ಫರಾಝ್ ಚೆನ್ನಾಗಿ ಆಡಿ ತಂಡವನ್ನು ಸೆಮಿಫೈನಲ್‌ಗೆ ತಲುಪಿಸಿದ್ದರು. 9.2 ಓವರ್‌ಗಳಲ್ಲಿ 2ವಿಕೆಟ್ ನಷ್ಟದಲ್ಲಿ 27 ರನ್ ಗಳಿಸಿದ್ದಾಗ ಸರ್ಫರಾಝ್ ಖಾನ್ ಕ್ರೀಸ್‌ಗೆ ಆಗಮಿಸಿದ್ದರು. ಅನ್ಮೋಲ್‌ಪ್ರೀತ್ ಸಿಂಗ್ ಜೊತೆ ನಾಲ್ಕನೆವಿಕೆಟ್‌ಗೆ 96 ರನ್‌ಗಳ ಕೊಡುಗೆ ನೀಡಿದ್ದರು. ಇದರಲ್ಲಿ ಅವರ ವೈಯಕ್ತಿಕ ಕೊಡುಗೆ 59 ರನ್. ತಂಡದಸ್ಕೋರ್ 30.2 ಓವರ್‌ಗಳಲ್ಲಿ 120ಕ್ಕೆ ತಲುಪುವ ತನಕ ಅವರು ಕ್ರೀಸ್ ಬಿಡಲಿಲ್ಲ. ಫೈನಲ್‌ನಲ್ಲೂ ಅದೇ ಆಟವನ್ನು ಸರ್ಫರಾಝ್ ಮುಂದುವರಿಸಿದ್ದರು.
ಎರಡನೆ ಪ್ರಯತ್ನ:
ಸರ್ಪರಾಝ್ ಎರಡನೆ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದಾರೆ. 2014ರ ಆವೃತ್ತಿಯ ವಿಶ್ವಕಪ್‌ನಲ್ಲೂ ಅವರು ಚೆನ್ನಾಗಿ ಆಡಿದ್ದರು.ತಂಡದಲ್ಲಿ ಅನುಭವಿ ಆಟಗಾರನಾಗಿದ್ದ ಸರ್ಫರಾಝ್‌ಗೆ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ನಲ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಅವ ರ ಮಾರ್ಗದರ್ಶನ ಕ್ರಿಕೆಟ್‌ನಲ್ಲಿ ಇನಷ್ಟು ಬೆಳೆಯಲು ನೆರವಾಗಿದೆ.
ಬ್ಯಾಟಿಂಗ್‌ನಲ್ಲಿ ಎರಡನೆ ಸ್ಥಾನ:
ಸರ್ಫರಾಝ್ ಖಾನ್ ಆಡಿರುವ ಆರು ಪಂದ್ಯಗಳಲ್ಲಿ ಒಟ್ಟು 355 ರನ್ ದಾಖಲಿಸಿದ್ದಾರೆ.ಗರಿಷ್ಠ ರನ್ ದಾಖಲಿಸಿರುವ ಆಟಗಾರರ ಪೈಕಿ 2ನೆ ಸ್ಥಾನ ಪಡೆದಿದ್ದಾರೆ.5 ಅರ್ಧಶತಕ ದಾಖಲಿಸಿದ್ದಾರೆ.ಗರಿಷ್ಠ ವೈಯಕ್ತಿಕ ಸ್ಕೋರ್ 76 ರನ್.







