ಸರ್ಕಾರದಿಂದ ಹೊಸದಾಗಿ 100 ಎಫ್.ಎಂ. ರೆಡಿಯೋ ಕೇಂದ್ರಗಳ ಆರಂಭ - ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋರ್

ಮುಂಬೈ.ಫೆ.15: ಎಫ್.ಎಂ. ವಾಹಿನಿಗಳನ್ನು ಆರಂಭಿಸಲು ಖಾಸಗಿ ವಲಯದವರು ಮುಂದೆ ಬಾರದ ಪ್ರದೇಶಗಳಲ್ಲಿ ಸರ್ಕಾರ ಹೊಸದಾಗಿ 100 ಎಫ್.ಎಂ. ರೆಡಿಯೋ ಕೇಂದ್ರಗಳನ್ನು ಆರಂಭಿಸಲಿದೆ ಎಂದು ಕೇಂದ್ರ ಸಮಾಚಾರ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋರ್ ಹೇಳಿದ್ದಾರೆ.
ಮುಂಬೈನಲ್ಲಿ ಆಯೋಜಿಸಲಾದ ಮೇಕ್ ಇನ್ ಇಂಡಿಯಾ ಸಪ್ತಾಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರಾವಳಿ, ಗಡಿ ಮತ್ತು ನಕ್ಸಲ್ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಸರ್ಕಾರ ಹೊಸ ಎಫ್.ಎಂ. ರೆಡಿಯೋ ವಾಹಿನಿಗಳನ್ನು ಆರಂಭಿಸಲಿದೆ. ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ನಗರಗಳಲ್ಲಿ ಕನಿಷ್ಠ ಮೂರು ಎಫ್.ಎಂ. ಕೇಂದ್ರಗಳು ಅಗತ್ಯವಾಗಿವೆ ಎಂದರು.
ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗುವ ಚಲನಚಿತ್ರಗಳಿಗೆ ಹಣಕಾಸಿನ ನೆರವು ನೀಡಲು ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದೆ. ಚಿತ್ರೋದ್ಯಮಕ್ಕೆ ಅನುಕೂಲ ಮಾಡಿಕೊಡಲು ಸಮಿತಿಯೊಂದನ್ನು ರಚಿಸಲಾಗುತ್ತಿದ್ದು, ಸಮಿತಿ ನೀಡುವ ವರದಿ ಆಧಾರದ ಮೇಲೆ ಚಿತ್ರೋದ್ಯಮಕ್ಕೆ ನೆರವು ನೀಡಲಾಗುವುದು ಎಂದು ರಾಜ್ಯವರ್ಧನ್ ರಾಥೋರ್ ಹೇಳಿದರು.





