ಸಜಿಪಮೂಡ: ತಾಪಂ ಎಸ್.ಡಿ.ಪಿ.ಐ. ಅಭ್ಯರ್ಥಿಗೆ ಮಾರಕಾಸ್ತ್ರದಿಂದ ಹಲ್ಲೆ

ಬಂಟ್ವಾಳ, ಫೆ. 15: ಸಜಿಪಮೂಡ ತಾಲೂಕು ಪಂಚಾಯತ್ ಎಸ್‌ಡಿಪಿಐ ಅಭ್ಯರ್ಥಿಯೋರ್ವನಿಗೆ ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರದಿಂದ ಕಡಿದು ಪರಾರಿಯಾದ ಘಟನೆ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ತಾಲೂಕಿನ ಮಾರ್ನೆಬೈಲ್-ಬೋಗೋಡಿ ನಡುವಿನ ಕಟ್ಟೆಯೊಂದರ ಬಳಿ ನಡೆದಿದೆ.
ಸಜಿಪಮೂಡ ಗ್ರಾಮದ ಕೊಳಕೆ ನಿವಾಸಿ ಪಿ.ಜೆ.ಯೂಸುಫ್ ಎಂಬವರ ಮಗ ಝಕರಿಯಾ ಮಲಿಕ್(30) ಕಡಿತಕ್ಕೊಳಗಾದ ಅಭ್ಯರ್ಥಿ. ಇವರು ಕೊಳಕೆಯಿಂದ ತನ್ನ ಬೈಕ್‌ನಲ್ಲಿ ಬಂಟ್ವಾಳದಲ್ಲಿರುವ ಅತ್ತೆ ಮನೆಗೆ ತೆರಳುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ತಲ್ವಾರಿನಿಂದ ಕಡಿದು ಪರಾರಿಯಾಗಿದ್ದಾರೆ. ಘಟನೆಯಿಂದ ಮಲಿಕ್‌ನ ಎಡಗೈಗೆ ಆಳವಾದ ಗಾಯವಾಗಿದ್ದು, ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಜಿಪಮೂಡ ತಾಲೂಕು ಪಂಚಾಯತ್ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿಯಾಗಿ ಅವರು ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ನಿಮಿತ್ತ ಬೆಳಗ್ಗೆಯಿಂದ ಸಂಜೆಯವರೆಗೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅವರು, ರಾತ್ರಿ ಮನೆಯಿಂದ ಹೊರಟ್ಟಿದ್ದರು. ಮಾರ್ನೆಬೈಲ್-ಬೋಗೋಡಿ ಸಮೀಪದ ಕಟ್ಟೆಯೊಂದರ ಬಳಿ ಈ ಘಟನೆ ಸಂಭವಿಸಿದೆ. ಸುದ್ದಿ ತಿಳಿಯುತ್ತಿದಂತೆ ತುಂಬೆ ಆಸ್ಪತ್ರೆ ಮುಂಭಾಗದಲ್ಲಿ ನೂರಾರು ಮಂದಿ ಕಾರ್ಯಕರ್ತರು ಜಮಾಯಿಸಿದರು.
ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಬಂಟ್ವಾಳ ವೃತ್ತ ನಿರೀಕ್ಷ ಬೆಳ್ಳಿಯಪ್ಪ, ನಗರ ಠಾಣೆ ಎಸ್ಸೈ ನಂದಕುಮಾರ್, ಗ್ರಾಮಾಂತರ ಠಾಣೆ ಎಸ್ಸೈ ರಕ್ಷಿತ್ ಎ.ಕೆ. ಹಾಗೂ ಅವರ ಸಿಬ್ಬಂದಿ ಭೇಟಿ ನೀಡಿದರು.







