ರಿಯಾದ್: ತಾಯಿಯನ್ನೇ ಗುಂಡಿಕ್ಕಿ ಕೊಂದ ಮಗ

ರಿಯಾದ್,ಫೆ.12: ನಲ್ವತ್ತರ ಹರೆಯದ ಸೌದಿ ಪ್ರಜೆಯೊಬ್ಬ ತನ್ನ ತಾಯಿಗೆ ಗುಂಡಿಕ್ಕಿ ಹತ್ಯೆಗೈದ ಬರ್ಬರ ಘಟನೆ ಶನಿವಾರ ಬದೆರ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಥಳೀಯ ನಿವಾಸಿಯೊಬ್ಬರು ನೀಡಿದ ಸುಳಿವಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದರೆಂದು ರಿಯಾದ್ ಪೊಲೀಸ್ ವಕ್ತಾರ ಕ.ಫವಾಝ್ ಬಿನ್ ಜಮೀಲ್ ಅಲ್-ಮೈಮಾನ್ ತಿಳಿಸಿದ್ದಾರೆ. ಶಿಫಾ ಪೊಲೀಸರು ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಕಳೆದ ಏಳು ದಿನಗಳಲ್ಲಿ ರಿಯಾದ್ ಪೊಲೀಸರು ನಿರ್ವಹಿಸಿದ ಮೂರನೆ ಕೊಲೆ ಪ್ರಕರಣದ ತನಿಖೆ ಇದಾಗಿದೆ. ಸೋಮವಾರ ಅಝೀಝಿಯಾ ಜಿಲ್ಲೆಯಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸೌದಿ ಯುವಕನೊಬ್ಬನನ್ನು ಇನ್ನೋರ್ವ ಸೌದಿ ಪ್ರಜೆ ಕೊಲೆ ಮಾಡಿದ್ದ. ಆ ದಿನವೇ ಟ್ರಾಫಿಕ್ ವಿಷಯಕ್ಕೆ ಸಂಬಂಧಿಸಿ ಉಂಟಾದ ವಾಗ್ವಾದದಲ್ಲಿ ಮೂವರು ಸೌದಿ ಪ್ರಜೆಗಳು ಅನಿವಾಸಿ ಈಜಿಪ್ಟ್ ನಾಗರಿಕನೊಬ್ಬನ ಮೇಲೆ ಕಾರು ಹರಿಸಿ ಹತ್ಯೆಗೈದಿದ್ದರು. ಈ ಎರಡೂ ಪ್ರಕರಣಗಳಲ್ಲೂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.





