ಎಂಡೋ ಸಮಸ್ಯೆಯ ಕುರಿತು ಕೇರಳ ಸರಕಾರಕ್ಕೆ ವರದಿ ಮಿಂಚಿಪದವು ಎಂಡೋ ಪ್ರದೇಶಕ್ಕೆ ಎಸಿ ಭೇಟಿ
ಪುತ್ತೂರು, ಫೆ.15: ಎಂಡೋಪೀಡಿತ ಕರ್ನಾಟಕದ ಗಡಿಪ್ರದೇಶ ಈಶ್ವರಮಂಗಲ ಸಮೀಪದ ಮಿಂಚಿಪದವುಗೆ ಪುತ್ತೂರು ಸಹಾಯಕ ಕಮಿಷನರ್ ರಾಜೇಂದ್ರ ಕೆ.ವಿ. ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮಿಂಚಿಪದವು ಪರಿಸರದಲ್ಲಿ ಗೇರುತೋಪು ಇದ್ದು ಹಲವು ವರ್ಷಗಳ ಹಿಂದೆ ಈ ಪ್ರದೇಶದಲ್ಲಿನ ಗೇರುಮರಕ್ಕೆ ಎಂಡೋ ಸಿಂಪಡನೆ ಮಾಡಲಾಗಿತ್ತು. ಎಂಡೋ ನಿಷೇಧದ ಬಳಿಕ ಬಳಕೆ ಮಾಡುತ್ತಿದ್ದ ಎಂಡೋ ಬಾಟಲಿಗಳನ್ನು ಮಿಂಚಿಪದವು ಸಮೀಪದ ಪಾಳು ಬಾವಿಯೊಂದರಲ್ಲಿ ಹಾಕಿ ಮುಚ್ಚಲಾಗಿತ್ತು. ಇದರ ಪರಿಣಾಮವಾಗಿ ಕರ್ನಾಟಕ ವ್ಯಾಪ್ತಿಗೆ ಸೇರುವ ಮಿಂಚಿಪದವು ಪರಿಸರದಲ್ಲಿ ಹಲವು ಮಂದಿಗೆ ಎಂಡೋ ಸೋಂಕು ತಗಲಿತ್ತು. ಮಳೆಗಾಲದಲ್ಲಿ ಬಾವಿಯಲ್ಲಿ ನೀರು ತುಂಬುವ ಕಾರಣ ಅದರಲ್ಲಿನ ಎಂಡೋ ವಿಷ ಸಮೀಪದ ಬಾವಿಗಳಿಗೂ ಪಸರಿಸಿತ್ತು.
ಆ ಹಿನ್ನೆಲೆಯಲ್ಲಿ ಪುತ್ತೂರು ಎಸಿ ಸ್ಥಳಕ್ಕೆ ಭೇಟಿ ನೀಡಿ ಎಂಡೋ ಬಾಟಲಿಗಳನ್ನು ಹೂತಿಟ್ಟ ಬಾವಿಯನ್ನು ಪರಿಶೀಲಿಸಿ ಸ್ಥಳೀಯ ನಿವಾಸಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು ಇಲ್ಲಿನ ಸಮಸ್ಯೆಯ ಕುರಿತು ಕೇರಳ ಸರಕಾರಕ್ಕೆ ವರದಿ ನೀಡಲಾಗುತ್ತದೆ. ಬಾವಿಯಲ್ಲಿ ಎಂಡೋ ಬಾಟಲಿಗಳು ಇದೆಯೋ ಇಲ್ಲವೋ ಮತ್ತು ಬಾಟಲಿಗಳಲ್ಲಿ ಎಂಡೋ ಈಗಲೂ ಇದೆಯಾ ಎಂದು ಪರಿಶೀಲನೆ ಮಾಡಬೇಕಿದೆ. ಬಾವಿ ಕೇರಳ ವ್ಯಾಪ್ತಿಯಲ್ಲಿರುವ ಕಾರಣ ಅಲ್ಲಿನ ಸರಕಾರದ ಅನುಮತಿ ಅಗತ್ಯವಾಗಿದೆ. ಅನುಮತಿ ನೀಡುವಂತೆ ಕೇರಳ ಸರಕಾರಕ್ಕೆ ಮನವಿ ಮಾಡಲಾಗುವುದು. ಇಲ್ಲವಾದರೆ ಅವರೇ ಬಾವಿಯನ್ನು ಪರಿಶೀಲನೆ ಮಾಡುವಂತೆ ಕೇಳಿಕೊಳ್ಳಲಾಗುವುದು ಎಂದರು. ಇಲ್ಲಿನ ಜನರ ಸಮಸ್ಯೆಯ ಕುರಿತು ವಾರದೊಳಗೆ ವರದಿ ನೀಡುವಂತೆ ನೆಟ್ಟಣಿಗೆ ಮುಡ್ನೂರು ಗ್ರಾಮಕರಣಿಕರಿಗೆ ಎಸಿ ಸೂಚನೆ ನೀಡಿದರು. ಈ ಸಂದರ್ಭ ನೆಟ್ಟಣಿಗೆ ಮುಡ್ನೂರು ಗ್ರಾಪಂ ಉಪಾಧ್ಯಕ್ಷ ಶ್ರೀರಾಂ ಪಕ್ಕಳ ಮತ್ತಿತರರು ಉಪಸ್ಥಿತರಿದ್ದರು.







