ನಕಲಿ ಟ್ವೀಟ್ ವಿವಾದ: ಭಾರತದ ವಿರುದ್ಧ ಹಫೀಝ್ ಕಿಡಿ
ಹೊಸದಿಲ್ಲಿ, ಫೆ.15: ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆಯೊಂದಿಗೆ ತನಗೆ ನಂಟು ಕಲ್ಪಿಸಲು ‘ನಕಲಿ’ ಟ್ವಿಟರ್ ಖಾತೆಯನ್ನು ಬಳಸಿದ್ದಕ್ಕಾಗಿ, ಲಷ್ಕರೆ ತಯ್ಯಿಬಾ ಸಂಘಟನೆಯ ವರಿಷ್ಠ ಹಫೀಝ್ ಸಯೀದ್, ಭಾರತ ಸರಕಾರದ ವಿರುದ್ಧ ಕಿಡಿಕಾರಿದ್ದಾನೆ. ಭಾರತ ಸರಕಾರವು ತನ್ನದೇ ಜನತೆಯನ್ನು ಹೇಗೆ ಮೂರ್ಖರನ್ನಾಗಿ ಮಾಡುತ್ತಿದೆಯೆಂಬುದಕ್ಕೆ ಇದೊಂದು ಪ್ರಮುಖ ಉದಾಹರಣೆಯೆಂದು ಅವನು ಹೇಳಿದ್ದಾನೆ.
ಜೆಎನ್‌ಯ್ಫು ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಸಯೀದ್, 26/11 ಭಯೋತ್ಪಾದಕ ದಾಳಿಯ ಬಗ್ಗೆ ಭಾರತ ಸರಕಾರವು ಜನರನ್ನು ತಪ್ಪುದಾರಿಗೆಳೆಯುತ್ತಿರುವುದಾಗಿ ಆರೋಪಿಸಿದ್ದಾನೆ. ಅಫ್ಝಲ್‌ಗುರುವನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ, ಜೆಎನ್‌ಯುವಿನಲ್ಲಿ ಕೆಲವು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಹಫೀಝ್ ಸಯೀದ್‌ನ ಬೆಂಬಲವಿತ್ತೆಂಬ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ಸಿಂಗ್ ನೀಡಿರುವ ಹೇಳಿಕೆಯು ಭಾರೀ ಪರವಿರೋಧ ಚರ್ಚೆಗೆ ಕಾರಣವಾಗಿತ್ತು.
‘‘ಜೆಎನ್‌ಯು ಘಟನೆಗೆ ಹಫೀಝ್ ಸಯೀದ್‌ನ ಬೆಂಬಲವಿತ್ತು. ಈ ಸತ್ಯವನ್ನು ದೇಶವು ತಿಳಿದುಕೊಳ್ಳಬೇಕಾದ ಅಗತ್ಯವಿದೆ’’ ಎಂದು ಸಿಂಗ್, ರವಿವಾರ ಅಲಹಾಬಾದ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು. ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಬೆಂಬಲಿಸುವಂತೆ ಕರೆ ನೀಡುವ ನಕಲಿ ಟ್ವಿಟರ್ ಖಾತೆಯೊಂದು ಪ್ರಸಾರಗೊಂಡ ಕೆಲವು ದಿನಗಳ ಬಳಿಕ ರಾಜ್‌ನಾಥ್‌ಸಿಂಗ್ ಈ ಹೇಳಿಕೆ ನೀಡಿದ್ದರು.
ಈ ಟ್ವೀಟ್ ಪ್ರಕಟವಾದ ಕೆಲವೇ ತಾಸುಗಳೊಳಗೆ ದಿಲ್ಲಿ ಪೊಲೀಸರು, ಟ್ವಿಟರ್‌ನಲ್ಲಿ ಪ್ರಕಟಿಸಿದ ಕೋರಿಕೆಯೊಂದರಲ್ಲಿ, ಸಯೀದ್‌ನ ಟ್ವೀಟ್ ಸಂದೇಶಕ್ಕೆ ಮರುಳಾಗಬಾರದೆಂದು ಸೂಚಿಸಿದರು. ‘‘ದೇಶವಿರೋಧಿ ವಾಗ್ವೈಖರಿಗೆ ಮರಳಾಗದಿರಿ’’ ಎಂದು ದಿಲ್ಲಿ ಪೊಲೀಸರು ಟ್ವಿಟರ್ ಮತ್ತಿತರ ಜಾಲತಾಣಗಳಲ್ಲಿ ವಿದ್ಯಾರ್ಥಿಗಳನ್ನು ವಿನಂತಿಸಿದ್ದರು.
ಆದರೆ ಕೆಲವೇ ತಾಸುಗಳಲ್ಲಿ, ವಿವಾದಿತ ಟ್ವಿಟರ್ ಲಷ್ಕರ್ ವರಿಷ್ಠ ಹಫೀಝ್ ಸಯೀದ್‌ನದ್ದಲ್ಲವೆಂದು ದೃಢಪಟ್ಟಿತು. ಏತನ್ಮಧ್ಯೆ ಹಫೀಝ್ ಸಯೀದ್ ಕೂಡಾ ಯೂಟ್ಯೂಬ್‌ನಲ್ಲಿ ವೀಡಿಯೊ ಬಿಡುಗಡೆಗೊಳಿಸಿ, ಆ ಟ್ವೀಟ್ ತನ್ನದ್ದಲ್ಲವೆಂದು ಸ್ಪಷ್ಟಪಡಿಸಿದ್ದಾನೆ. ಆದಾಗ್ಯೂ ಆ ವಿಡಿಯೋವು ಅಸಲಿಯೇ ಎಂಬುದು ಕೂಡಾ ಇನ್ನಷ್ಟೇ ದೃಢೀಕೃತಗೊಳ್ಳಬೇಕಾಗಿದೆ.
ಜೆಎನ್‌ಯು ಪ್ರತಿಭಟನೆಗೆ ರಾಜ್‌ನಾಥ್‌ಸಿಂಗ್ ಹೇಳಿಕೆಯಿಂದ ಭುಗಿಲೆದ್ದಿರುವ ವಿವಾದವನ್ನು ಶಮನಗೊಳಿಸುವ ಯತ್ನವಾಗಿ, ಕೇಂದ್ರ ಗೃಹಸಚಿವಾಲಯವು, ವಿವಿಧ ಏಜೆನ್ಸಿಗಳ ಮೂಲಕ ದೊರೆತ ಮಾಹಿತಿಗಳನ್ನು ಆಧರಿಸಿ,ಜೆಎನ್‌ಯು ಪ್ರತಿಭಟನೆಯ ಜೊತೆ ಸಯೀದ್‌ಗೆ ನಂಟು ಇದೆಯೆಂಬ ಹೇಳಿಕೆಯನ್ನು ಗೃಹ ಸಚಿವರು ನೀಡಿದ್ದಾರೆಂದು ಸ್ಪಷ್ಟಪಡಿಸಿದೆ.





