‘ಸೆಲ್ಫಿ ಸಾವಿ’ಗೆ ಮೋದಿ ಕಾರಣ..?!
‘ಸೆಲ್ಫಿ’ ಎನ್ನುವುದು ಇದೀಗ ವ್ಯಸನವಾಗುತ್ತಿದೆ, ಚಟವಾಗುತ್ತಿದೆ. ಮುಂದೆ ರೋಗವೂ ಆಗಬಹುದು..! ಮೊನ್ನೆ ಮಂಡ್ಯ, ನಾಸಿಕ್‌ನಲ್ಲಿ ಸೆಲ್ಫಿ ತೆಗೆಯುವ ವೇಳೆ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಇದು ಭಾರೀ ಆತಂಕವನ್ನು ಸೃಷ್ಟಿಸಿತ್ತು. ಅಲ್ಲದೇ ಈ ಸಾವಿಗೆ ಯಾರು ಹೊಣೆ ಎಂಬ ಪ್ರಶ್ನೆಯೂ ಉದ್ಭವಿಸಿತು.
ಇದ್ದ-ಬದ್ದ ಕಡೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಪರಿ ಈಗಂತೂ ಜೋರಾಗುತ್ತಿದೆ. ಒಂಥರಾ ಸೆಲ್ಫಿ ಮೋಡಿಗೆ ಸಿಲುಕಿರುವ ಯುವಜನಾಂಗ ತಮ್ಮ ಪ್ರಾಣವನ್ನು ಲೆಕ್ಕಿಸದೇ ನದಿ, ಸಮುದ್ರ, ಬೆಟ್ಟ, ರೈಲು, ಬಸ್ ಹೀಗೆ ಮುಂತಾದ ಸ್ಥಳಗಳಲ್ಲಿ ತೆಗೆಯಬಾರದ ಕಡೆ ಸೆಲ್ಪಿ ತೆಗೆಯುವ ವೇಳೆ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳದೇ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದಕ್ಕೆ ಪರೋಕ್ಷವಾಗಿ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಆಧುನಿಕ ವಿಧಾನಗಳು ಕಾರಣ ಎಂದು ಹೇಳಬಹುದು. ಪ್ರಧಾನಿಯಾದ ನಂತರ ಮೋದಿಯವರು ವಿದೇಶ ಪ್ರವಾಸದ ಸಮಯದಲ್ಲಿ ಗಣ್ಯರ ಜೊತೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿರುವುದು ಯುವಜನಾಂಗದ ಸೆಲ್ಫಿ ಕ್ರೇಜಿಗೆ ಒಂದು ಕಾರಣ. ಅಲ್ಲದೇ ಇನ್ನೊಬ್ಬರನ್ನು ಆಕರ್ಷಿಸಲು, ಲೈಕ್ ಸಂಖ್ಯೆ ಹೆಚ್ಚಿಸಲು, ಪುಕ್ಕಟೆ ಪ್ರಚಾರ ಮಾಡಲು ‘ಸೆಲ್ಫಿ’ ಒಂದು ಕಾರಣವಾಗುತ್ತಿದೆ. ‘ಸೆಲ್ಫಿ’ಯನ್ನು ಯಾರು ಕಂಡು ಹಿಡಿದರು ಎನ್ನುವುದಕ್ಕಿಂತ ‘ಸೆಲ್ಫಿ’ ತೆಗೆಯುವ ವೇಳೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೆ ಒಳ್ಳೆಯದು.





