ಗಾಂಧಿಗೆ ‘ಮಹಾತ್ಮಾ’ ಬಿರುದು ನೀಡಿದುದು ಟಾಗೋರರಲ್ಲ, ಅಜ್ಞಾತ ಪತ್ರಕರ್ತ!
ಗುಜರಾತ್ ಸರಕಾರದ ವಾದ
ಅಹ್ಮದಾಬಾದ್, ಫೆ.15: ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಶ್ವಕವಿ ರವೀಂದ್ರನಾಥ ಟಾಗೋರರು ಗಾಂಧೀಜಿಯವರಿಗೆ ‘ಮಹಾತ್ಮಾ’ ಎಂಬ ಬಿರುದು ನೀಡಿದರೆಂದು ಭಾರತಾದ್ಯಂತ ಶಾಲೆಗಳಲ್ಲಿ ಕಲಿಯುತ್ತಾ ಬಂದಿದ್ದೇವೆ. ಆದರೆ ಗುಜರಾತ್ ಸರಕಾರ ಇದನ್ನು ನಿರಾಕರಿಸಿದೆ. ಮಾತ್ರವಲ್ಲ, ಅನಾಮಧೇಯ ಪತ್ರಕರ್ತನೊಬ್ಬ ಗಾಂಧೀಜಿಗೆ ಈ ಬಿರುದು ನೀಡಿದವನಾಗಿದ್ದಾನೆಂದು ಹೇಳುತ್ತಿದೆ.
ರಾಜಕೋಟ ಹಾಗೂ ಇತರ 5-6 ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯ ತಲಾಟಿ ಹುದ್ದೆಗಳಿಗಾಗಿ ಪರೀಕ್ಷೆ ನಡೆಸುತ್ತಿರುವ ನೇಮಕಾತಿ ಸಂಸ್ಥೆ, ರಾಜಕೋಟ್ ಜಿಲ್ಲಾ ಪಂಚಾಯತ್ ಶಿಕ್ಷಣ ಸಮಿತಿ, ಗಾಂಧಿಯವರು ಇನ್ನೂ ದಕ್ಷಿಣ ಆಫ್ರಿಕದಲ್ಲಿದ್ದಾಗ, ಜೇಟ್ಪುರದಿಂದ ಬರೆಯಲಾಗಿದ್ದ ಅನಾಮಧೇಯ ಪತ್ರವೊಂದರಲ್ಲಿ ಗಾಂಧೀಜಿಯವರನ್ನು ಮೊದಲ ಬಾರಿಗೆ ‘ಮಹಾತ್ಮಾ’ ಎಂದು ಉಲ್ಲೇಖಿಸಲಾಗಿತ್ತೆಂಬುದನ್ನು ಗುಜರಾತ್ ಸರಕಾರ ಪ್ರತಿಪಾದಿಸಿದೆ. ಗುಜರಾತ್ ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಇದನ್ನು ಉಲ್ಲೇಖಿಸಲಾಗಿದ್ದು, ತನ್ನ ಪ್ರತಿಪಾದನೆಗೆ ಗಾಂಧಿವಾದಿ ನಾರಾಯಣ ದೇಸಾಯಿಯವರ ಪುಸ್ತಕವೊಂದನ್ನು ಆಧಾರವಾಗಿ ನೀಡಿದೆ.
ವರದಿಗಾರನ ಹೆಸರು ಅಜ್ಞಾತವಾಗಿಯೇ ಉಳಿದಿದೆಯೆಂದು ಅದು ಹೇಳಿದೆ.
ಪರೀಕ್ಷೆಯ ಅಭ್ಯರ್ಥಿ ಸಂಧ್ಯಾ ಮಾರು ಎಂಬವರು ಮೂರು ಪ್ರಶ್ನೆಗಳಿಗೆ ಸಂಬಂಧಿಸಿದ ಉತ್ತರಗಳ ಬಗ್ಗೆ ಗುಜರಾತ್ ಹೈಕೋರ್ಟ್‌ನಲ್ಲಿ ಅರ್ಜಿಯೊಂದನ್ನು ದಾಖಲಿಸಿದಾಗ ವಿವಾದ ಸೃಷ್ಟಿಯಾಗಿತ್ತು. ತಾತ್ಕಾಲಿಕ ಉತ್ತರಗಳು ಸರಿಯಾಗಿದ್ದವು. ಆದರೆ, ಅಂತಿಮ ಉತ್ತರಗಳಲ್ಲಿ ತಪ್ಪು ಉತ್ತರಗಳನ್ನು ನೀಡಲಾಗಿತ್ತೆಂದು ಅವರು ಆರೋಪಿಸಿದ್ದರು.
ಗಾಂಧಿಯವರನ್ನು ಯಾರು ಮೊದಲಿಗೆ ‘ಮಹಾತ್ಮಾ’ ಎಂದು ಕರೆದರೆಂಬ ಪ್ರಶ್ನೆಗೆ ‘ಟಾಗೋರ್’ ಎಂದು ತಾತ್ಕಾಲಿಕ ಉತ್ತರದಲ್ಲಿ ಹೇಳಲಾಗಿತ್ತು. ಆದರೆ, ಅಂತಿಮ ಉತ್ತರದಲ್ಲಿ, ‘ಅನಾಮಧೇಯ ಪತ್ರಕರ್ತ’ ಎಂದು ತಿಳಿಸಲಾಗಿತ್ತು. ಅದೇ ರೀತಿ, ವೌಂಟ್ ಎವರೆಸ್ಟ್ ಪದದ ಹಿಂದೆ ಯಾವ ಪ್ರತ್ಯಯ ಬಳಸಬೇಕು ಎಂಬ ಪ್ರಶ್ನೆಗೆ ‘ದಿ’ ಎಂಬ ಸರಿಯುತ್ತರವನ್ನು ‘ಎ’ ಎಂದು ಬದಲಾಯಿಸಲಾಗಿತ್ತು.
ಭಾರತದ ಅತಿ ಉದ್ದದ ನದಿ ಯಾವುದು ಎಂಬ ಮೂರನೆಯ ಪ್ರಶ್ನೆಗೂ ವಿವಾದಾತ್ಮಕ ಉತ್ತರ ನೀಡಲಾಗಿತ್ತು. ಅಂತಿಮ ಸರಿ ಉತ್ತರದಲ್ಲಿ ಅದನ್ನು ಗಂಗಾ ನದಿ ಇದ್ದುದು ಬ್ರಹ್ಮಪುತ್ರಾ ಎಂದು ಬದಲಿಸಲಾಗಿತ್ತು. ಬ್ರಹ್ಮಪುತ್ರಾ ನದಿ ಭಾರತದಲ್ಲಿ ಕೇವಲ 1,346 ಕಿ.ಮೀ. ಉದ್ದಕ್ಕೆ ಹರಿದರೆ, ಗಂಗಾನದಿಯು ದೇಶದಲ್ಲಿ 2,501 ಕಿ.ಮೀ. ಉದ್ದಕ್ಕೆ ಹರಿಯುತ್ತಿದೆಯೆಂಬುದು ಇಲ್ಲಿ ಉಲ್ಲೇಖನೀಯ. ಕೊನೆಯ ಪ್ರಶ್ನೆಯ ವಾಕ್ಯ ರಚನೆಯೂ ಸರಿಯಾಗಿಲ್ಲವೆಂದು ಅರ್ಜಿದಾರೆ ವಾದಿಸಿದ್ದರು.
ಈ ವಿಷಯದ ಬಗ್ಗೆ ಸಿಟ್ಟಾದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ಗಾಂಧಿಯವರ ಕುರಿತ ಪ್ರಶ್ನೆಗೆ ಅವರ ಉತ್ತರವೇನೆಂದು ಜಿಲ್ಲಾಪಂಚಾಯತ್‌ನ ಪರ ವಕೀಲ ಎಸ್.ಎಚ್. ಮುನ್ನಾರನ್ನು ಪ್ರಶ್ನಿಸಿದರು. ಪರೀಕ್ಷೆಯನ್ನು ಸರಿಯಾಗಿ ನಡೆಸಬೇಕು. ಸಂದಿಗ್ಧ ಉತ್ತರಗಳ ಪ್ರಶ್ನೆಗಳನ್ನು ಕೇಳಬಾರದೆಂದೂ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ವಿಚಾರಣೆ ಫೆ.17ಕ್ಕೆ ನಿಗದಿಯಾಗಿದೆ.





