ವಿಂಡೀಸ್ ಆಟಗಾರರ ವೇತನ ವಿವಾದ ಸುಖಾಂತ್ಯ: ವಿಶ್ವಕಪ್ ತಂಡ ಪ್ರಕಟ
ಸೈಂಟ್‌ಜಾನ್ಸ್, ಫೆ.15: ವೆಸ್ಟ್ ಇಂಡೀಸ್ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಮಂಡಳಿ ನಡುವಿನ ವೇತನ ವಿವಾದ ಕೊನೆಗೂ ಸುಖಾಂತ್ಯವಾಗಿದೆ. ಭಾರತದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ 12 ಆಟಗಾರರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ತಂಡದ ಹಿರಿಯ ದಾಂಡಿಗ ಡರೆನ್ ಬ್ರಾವೊ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಗಮನ ನೀಡುವ ನೆಪವೊಡ್ಡಿ ಟ್ವೆಂಟಿ-20 ಟೂರ್ನಿಯಿಂದ ಹೊರಗುಳಿದಿದ್ದಾರೆ.
ರವಿವಾರ ಗಡುವು ಮುಗಿಯುವ ಮೊದಲೇ ಸ್ಟಾರ್ ಆಟಗಾರರಾದ ಕ್ರಿಸ್ ಗೇಲ್, ನಾಯಕ ಡರೆನ್ ಸಮ್ಮಿ, ಸುಲೇಮನ್ ಬೆನ್, ಜಾಸನ್ ಹೋಲ್ಡರ್, ಆ್ಯಂಡ್ರೆ ಫ್ಲೆಚರ್, ಡ್ವೇಯ್ನೆ ಬ್ರಾವೊ, ಸ್ಯಾಮುಯೆಲ್ ಬದ್ರೀ, ಲೆಂಡ್ಲ್ ಸಿಮನ್ಸ್, ಜೆರೊಮ್ ಟೇಲರ್, ಆ್ಯಂಡ್ರೆ ರಸೆಲ್, ಮರ್ಲಾನ್ ಸ್ಯಾಮುಯೆಲ್ಸ್ ಹಾಗೂ ದಿನೇಶ್ ರಾಮ್ದೀನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಬ್ರಾವೋ ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿರುವ ವೆಸ್ಟ್‌ಇಂಡೀಸ್‌ನ ಮೂರನೆ ಕ್ರಿಕೆಟಿಗನಾಗಿದ್ದಾರೆ. ಸುನೀಲ್ ನರೇನ್ ಹಾಗೂ ಕೀರನ್ ಪೊಲಾರ್ಡ್ ಈಗಾಗಲೇ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಪೊಲಾರ್ಡ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೆ, ನರೇನ್ ಕಳೆದ ಕೆಲವು ಸಮಯದಿಂದ ಶಂಕಾಸ್ಪದ ಬೌಲಿಂಗ್ ಶೈಲಿಯ ಕಾರಣ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಟೂರ್ನಿಗೆ ಸಜ್ಜಾಗಲು ಅವರಿಗೆ ಈ ವರೆಗೆ ಸಾಧ್ಯವಾಗಿಲ್ಲ.
ಕೇವಲ 12 ಟ್ವೆಂಟಿ-20 ಪಂದ್ಯಗಳನ್ನು ಆಡಿರುವ 27ರ ಹರೆಯದ ಬ್ರಾವೊ ಟೆಸ್ಟ್ ಹಾಗೂ 50 ಓವರ್ ಕ್ರಿಕೆಟ್‌ನಲ್ಲಿ ಮಾತ್ರ ಗಮನ ನೀಡಲು ಬಯಸಿದ್ದಾರೆ. ಬ್ರಾವೊ ಬದಲಿ ಆಟಗಾರನನ್ನು ಇನ್ನೂ ನೇಮಕ ಮಾಡಲಾಗಿಲ್ಲ.
ಭಾರತದ ಪಿಚ್‌ನ ಬಗ್ಗೆ ಚೆನ್ನಾಗಿ ಅರಿತಿರುವ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ರನ್‌ಗಳ ಮಳೆಯೇ ಹರಿಸಿದ್ದಾರೆ.
ವೆಸ್ಟ್‌ಇಂಡೀಸ್ ಟ್ವೆಂಟಿ-20 ವಿಶ್ವಕಪ್ ತಂಡ: ಡರೆನ್ ಸಮ್ಮಿ(ನಾಯಕ), ಸುಲೇಮನ್ ಬೆನ್, ಜಾಸನ್ ಹೋಲ್ಡರ್, ಆ್ಯಂಡ್ರೆ ಫ್ಲೆಚರ್, ಡ್ವೇಯ್ನೆ ಬ್ರಾವೊ, ಸ್ಯಾಮುಯೆಲ್ ಬದ್ರೀ, ಲೆಂಡ್ಲ್ ಸಿಮನ್ಸ್, ಜೆರೊಮ್ ಟೇಲರ್, ಆ್ಯಂಡ್ರೆ ರಸ್ಸೆಲ್, ಮರ್ಲಾನ್ ಸ್ಯಾಮುಯೆಲ್ಸ್, ದಿನೇಶ್ ರಾಮ್ದಿನ್, ಕ್ರಿಸ್ ಗೇಲ್, ಅಶ್ಲೇ ನರ್ಸ್, ಕಾರ್ಲೊಸ್ ಬ್ರಾತ್‌ವೇಟ್.







