ದಕ್ಷಿಣ ಏಷ್ಯನ್ ಗೇಮ್ಸ್: ಶೂಟಿಂಗ್‌ನಲ್ಲಿ ಭಾರತಕ್ಕೆ 25 ಚಿನ್ನ

ಗುವಾಹಟಿ, ಫೆ.15: ಇಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶೂಟರ್‌ಗಳು ಮತ್ತೊಮ್ಮೆ ಉತ್ತಮ ಸಾಧನೆ ತೋರಿದ್ದಾರೆ. ಗೇಮ್ಸ್‌ನ ಶೂಟಿಂಗ್ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ 26 ಚಿನ್ನದ ಪದಕಗಳ ಪೈಕಿ 25 ಪದಕವನ್ನು ಗೆದ್ದುಕೊಂಡಿದ್ದಾರೆ.
ಶೂಟಿಂಗ್ ಸ್ಪರ್ಧೆಯ ಅಂತಿಮ ದಿನವಾದ ಸೋಮವಾರ ರಿಯೋ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಪಡೆದುಕೊಂಡಿರುವ ಗುರುಪ್ರೀತ್ ಸಿಂಗ್ ಪುರುಷರ ವೈಯಕ್ತಿಕ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಒಟ್ಟು 28 ಅಂಕವನ್ನು ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದಾರೆ.
ಮಹಿಳೆಯರ ವೈಯಕ್ತಿಕ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಒಟ್ಟು 194.4 ಅಂಕವನ್ನು ಗಳಿಸಿರುವ ಶ್ವೇತಾ ಸಿಂಗ್ ಸ್ವರ್ಣ ಪದಕ ಸಂಪಾದಿಸಿದರು. ಒಲಿಂಪಿಕ್ಸ್‌ನಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿರುವ ಹೀನಾ ಸಿಧು ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ 192.5 ಅಂಕವನ್ನು ಗಳಿಸಿ ಬೆಳ್ಳಿ ಪದಕವನ್ನು, 18ರಹರೆಯದ ಚಂಡೀಗಢದ ಶೂಟರ್ ಯಶಸ್ವಿನಿ ಸಿಂಗ್ ಕಂಚಿನ ಪದಕವನ್ನು ಗೆದ್ದುಕೊಂಡರು.
ಭಾರತ ಟೂರ್ನಿಯಲ್ಲಿ ಸ್ಪರ್ಧೆಯಲ್ಲಿದ್ದ 26 ಸ್ವರ್ಣ ಪದಕಗಳ ಪೈಕಿ ಒಂದು ಪದಕವನ್ನು ಬಾಂಗ್ಲಾದೇಶಕ್ಕೆ ಬಿಟ್ಟುಕೊಟ್ಟಿದ್ದು, ಉಳಿದ 25 ಪದಕಗಳನ್ನು ಗೆದ್ದುಕೊಂಡಿದೆ. ಆತಿಥೇಯ ಭಾರತ 25 ಚಿನ್ನ, 10 ಬೆಳ್ಳಿ ಹಾಗೂ 10 ಕಂಚಿನ ಪದಕವನ್ನು ಜಯಿಸಿದೆ. ಬಾಂಗ್ಲಾದೇಶ 1 ಚಿನ್ನ, ತಲಾ 3 ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದುಕೊಂಡಿದೆ.







