ರಣಜಿ ಟ್ರೋಫಿ: ಸೌರಾಷ್ಟ್ರ ಫೈನಲ್‌ಗೆ

ವಡೋದರಾ, ಫೆ.15: ಅಸ್ಸಾಂ ತಂಡವನ್ನು 10 ವಿಕೆಟ್‌ಗಳ ಅಂತರದಿಂದ ಹೀನಾಯವಾಗಿ ಸೋಲಿಸಿರುವ ಆತಿಥೇಯ ಸೌರಾಷ್ಟ್ರ ತಂಡ ರಣಜಿ ಟ್ರೋಫಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಮೊದಲ ಸೆಮಿಫೈನಲ್‌ನ ಮೂರನೆ ದಿನವಾದ ಸೋಮವಾರ 5 ವಿಕೆಟ್ ನಷ್ಟಕ್ಕೆ 254 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಸೌರಾಷ್ಟ್ರ 353 ರನ್‌ಗೆ ಆಲೌಟಾಯಿತು.119 ರನ್ ಮುನ್ನಡೆ ಸಾಧಿಸಿತು.
ಚೇತೇಶ್ವರ ಪೂಜಾರ 126 ರನ್ ಗಳಿಸಿ ಔಟಾದರು. ಔಟಾಗದೆ 42 ರನ್(44 ಎಸೆತ, 3 ಬೌಂಡರಿ, 3 ಸಿಕ್ಸರ್) ಗಳಿಸಿದ ಡಿಎಸ್‌ಪೂನಿಯಾ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.
ಎರಡನೆ ಇನಿಂಗ್ಸ್ ಆರಂಭಿಸಿದ ಅಸ್ಸಾಂ ತಂಡ 39.1 ಓವರ್‌ಗಳಲ್ಲಿ ಕೇವಲ 139 ರನ್‌ಗೆ ಸರ್ವಪತನ ಕಂಡಿತು. ಜೈದೇವ್ ಉನದ್ಕಟ್(5-45) ಹಾಗೂ ರಾಥೋಡ್(3-26) ಅಸ್ಸಾಂಗೆ ಸಿಂಹಸ್ವಪ್ನರಾದರು. ಅಸ್ಸಾಂನ ಪರ ಕೆಳ ಕ್ರಮಾಂಕದ ದಾಂಡಿಗ ಸೈಯದ್ ಮುಹಮ್ಮದ್(39 ರನ್, 69 ಎಸೆತ, 5 ಬೌಂಡರಿ) ಅಗ್ರ ಸ್ಕೋರರ್ ಎನಿಸಿಕೊಂಡರು.
ಗೆಲ್ಲಲು ಕೇವಲ 21 ರನ್ ಗುರಿ ಪಡೆದ ಸೌರಾಷ್ಟ್ರ ತಂಡ 3.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿತು. ಜೋಗಿಯಾನಿ(ಔಟಾಗದೆ 23) ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್
ಅಸ್ಸಾಂ ಪ್ರಥಮ ಇನಿಂಗ್ಸ್: 87 ಓವರ್‌ಗಳಲ್ಲಿ 234 ರನ್‌ಗೆ ಆಲೌಟ್
ಸೌರಾಷ್ಟ್ರ ಪ್ರಥಮ ಇನಿಂಗ್ಸ್: 113.5 ಓವರ್‌ಗಳಲ್ಲಿ 353 ರನ್‌ಗೆ ಆಲೌಟ್
(ಚೇತೇಶ್ವರ ಪೂಜಾರ 126, ಜಾಕ್ಸನ್ 47, ಜಾನಿ43, ಪೂನಿಯಾ ಔಟಾಗದೆ 42, ಕೆ.ದಾಸ್ 3-80, ಎಕೆ ದಾಸ್ 3-105)
ಅಸ್ಸಾಂ ದ್ವಿತೀಯ ಇನಿಂಗ್ಸ್: 39.1 ಓವರ್‌ಗಳಲ್ಲಿ 139 ರನ್‌ಗೆ ಆಲೌಟ್
(ಸೈಯದ್ ಮುಹಮ್ಮದ್ 39, ಜೈದೇವ್ ಉನದ್ಕಟ್ 5-45, ರಾಥೋಡ್ 3-26)
ಸೌರಾಷ್ಟ್ರ ದ್ವಿತೀಯ ಇನಿಂಗ್ಸ್: 3.1 ಓವರ್‌ಗಳಲ್ಲಿ 24/0
ಫೈನಲ್‌ನತ್ತ ಮುಂಬೈ ದಾಪುಗಾಲು
ಕಟಕ್, ಫೆ.15: ಸೂರ್ಯಕುಮಾರ್ ಯಾದವ್ ಹಾಗೂ ಆದಿತ್ಯ ತಾರೆ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಮಧ್ಯಪ್ರದೇಶ ತಂಡದ ವಿರುದ್ಧದ ಎರಡನೆ ಸೆಮಿಫೈನಲ್‌ನಲ್ಲಿ ಮುಂಬೈ ತಂಡ ಮೇಲುಗೈ ಸಾಧಿಸಿದೆ.
ಸೂರ್ಯಕುಮಾರ್(ಔಟಾಗದೆ 97) ಹಾಗೂ ತಾರೆ(ಔಟಾಗದೆ 90) ನಾಲ್ಕನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 190 ರನ್ ಸೇರಿಸಿದ್ದಾರೆ. ಈ ಇಬ್ಬರ ಸಾಹಸದಿಂದ ಮುಂಬೈ ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 285 ರನ್ ಗಳಿಸಿದೆ. ಮೊದಲ ಇನಿಂಗ್ಸ್‌ನಲ್ಲಿ 144 ರನ್ ಮುನ್ನಡೆ ಪಡೆದಿದ್ದ ಮುಂಬೈ ಇದೀಗ ಒಟ್ಟು 429 ರನ್ ಮುನ್ನಡೆಯಲ್ಲಿದೆ.
5 ವಿಕೆಟ್‌ನಷ್ಟಕ್ಕೆ 197 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಮಧ್ಯಪ್ರದೇಶ ತಂಡ 227 ರನ್‌ಗೆ ಆಲೌಟಾಯಿತು. ಮುಂಬೈನ ಮಧ್ಯಮ ವೇಗದ ಬೌಲರ್ ಬಲ್ವಿಂದರ್ ಸಂಧು 43 ರನ್‌ಗೆ 5 ವಿಕೆಟ್ ಕಬಳಿಸಿದರು. 2ನೆ ಇನಿಂಗ್ಸ್ ಆರಂಭಿಸಿದ ಮುಂಬೈ ಆರಂಭಿಕ ದಾಂಡಿಗ ಅಖಿಲ್ ಹೇರ್ವಾಡ್ಕರ್‌ರನ್ನು ಬೇಗನೆ ಕಳೆದುಕೊಂಡಿತು.
ಆಗ 2ನೆ ವಿಕೆಟ್‌ಗೆ 85 ರನ್ ಜೊತೆಯಾಟ ನಡೆಸಿದ ಭವಿನ್ ಥಕ್ಕರ್ ಹಾಗೂ ಶ್ರೇಯಸ್ ಐಯ್ಯರ್ ತಂಡವನ್ನು ಆಧರಿಸಿದರು. ದಿನದಾಟದಂತ್ಯಕ್ಕೆ ತಂಡವನ್ನು ಆಧರಿಸಿರುವ ಸೂರ್ಯಕುಮಾರ್ ಹಾಗೂ ತಾರೆ ಮುಂಬೈ ತಂಡವನ್ನು ಮೂರು ವರ್ಷಗಳ ನಂತರ ಮೊದಲ ಬಾರಿ ಫೈನಲ್ ತಲುಪಿಸಲು ಯತ್ನ ಮುಂದುವರಿಸಿದ್ದಾರೆ.







