ಸುಳ್ಯ : ಜಿಲ್ಲೆಯಲ್ಲಿ ಜಾಗ ನೀಡಿದರೆ ಟ್ರಕ್ ಟರ್ಮಿನಲ್ ನಿರ್ಮಾಣ ಸುಳ್ಯದಲ್ಲಿ ನಿಗಮದ ಅಧ್ಯಕ್ಷ ಡಾ. ಪ್ರಕಾಶಂ ಹೇಳಿಕೆ
ಸುಳ್ಯ: ದ.ಕ. ಜಿಲ್ಲೆಯಲ್ಲಿ 50 ಎಕರೆ ಜಾಗ ನೀಡಿದರೆ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ವತಿಯಿಂದ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಿಸಲಾಗುವುದು ಎಂದು ನಿಗಮದ ಅಧ್ಯಕ್ಷ ಡಾ ಪ್ರಕಾಶಂ ಹೇಳಿದರು.
ಸುಳ್ಯದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಹಲವೆಡೆ ಟ್ರಕ್ ಟರ್ಮಿನಲ್‌ಗಳ ಸ್ಥಾಪನೆಯಾಗಿದೆ. ಹೊಸದಾಗಿ ನಿರ್ಮಾಣ ಮಾಡಲು ನಿಗಮದಲ್ಲಿ ಹಣವೂ ಇದೆ. ದ.ಕ.ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಟ್ರಕ್ ಟರ್ಮಿನಲ್ ಜೊತೆಗೆ ಚಾಲಕರಿಗೆ ಮನೆಗಳನ್ನು ನಿರ್ಮಾಣ ಮಾಡುವ ಕಾರ್ಯವೂ ನಡೆಯಲಿದೆ ಎಂದು ಹೇಳಿದರು. ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಸುಮಾರು 3,500 ಕೋಟಿ ಹಣವಿದೆ. 100 ಕೋಟಿಯಲ್ಲಿ ಮಾತ್ರ ಖರ್ಚಾಗಿದೆ. ಕಾರ್ಮಿಕರ ನೋಂದಾವಣೆ ಕಡಿಮೆಯಾಗಿರುವುದೇ ಇದಕ್ಕೆ ಕಾರಣ. ಹೀಗಾಗಿ ಎಲ್ಲ ಕಾರ್ಮಿಕರು ಮಂಡಳಿಯಲ್ಲಿ ಹೆಸರು ನೋಂದಾಯಿಸಿ ಪ್ರಯೋಜನ ಪಡೆಯಬೇಕು. ಖಾಸಗಿ ಚಾಲಕರಿಗೆ ವಿಮೆ ಯೋಜನೆಯೂ ಜಾರಿಯಲ್ಲಿದೆ.ಇದರ ಪ್ರಯೋಜನವನ್ನೂ ಪಡೆದುಕೊಳ್ಳಬೇಕು ಎಂದವರು ಹೇಳಿದರು. ಕೆಪಿಸಿಸಿಯ ಕಾರ್ಮಿಕ ವಿಭಾಗದ ಅಧ್ಯಕ್ಷರೂ ಆಗಿರುವ ಡಾ ಪ್ರಕಾಶಂ, ಸಿದ್ಧರಾಮಯ್ಯ ಸರಕಾರ ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ತಮಿಳರಿಗೆ ಜಾತಿ ಪ್ರಮಾಣ ಪತ್ರ ನೀಡುವ ಕ್ರಾಂತಿಕಾರಕ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಈ ನಿಟ್ಟಿನಲ್ಲಿ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಕಾರ್ಮಿಕರು ಕಾಂಗ್ರೆಸ್ ಪರ ಮತ ಚಲಾಯಿಸಲಿದ್ದಾರೆ ಎಂದು ಹೇಳಿದರು. ಕಾರ್ಮಿಕ ಮುಖಂಡರಾದ ಎ.ಎಸ್.ಚಂದ್ರಲಿಂಗಂ, ಶಿವಕುಮಾರ್ ಕೌಡಿಚ್ಚಾರ್, ಕನಕರಾಜ್, ಬಾಲಸುಬ್ರಹ್ಮಣಂ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.





