ಪುತ್ತೂರು: ಮತದಾನ ಬಹಿಷ್ಕರಿಸಿದ ಕಾವು ಬಾಳೆಕೊಚ್ಚಿಗೆ ಐವನ್ ಡಿ’ಸೋಜಾ ಭೇಟಿ: ಸ್ಥಳೀಯರ ಮನವೊಲಿಕೆ

ಪುತ್ತೂರು: ರಸ್ತೆ ಅಭಿವೃದ್ಧಿ ಹಾಗೂ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡದಿರುವ ಬಗ್ಗೆ ಜಿಪಂ. ಮತ್ತು ತಾಪಂ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿರುವ ಪುತ್ತೂರು ತಾಲೂಕಿನ ಕಾವು ಮಾಡ್ನೂರು ಗ್ರಾಮದ ಬಾಳೆಕೊಚ್ಚಿ ಪರಿಸರಕ್ಕೆ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಬುಧವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಪ್ರದೇಶದ ಸಮಸ್ಯೆಗಳನ್ನು ತಿಳಿಸಿದ ಸ್ಥಳೀಯರಾದ ವಿಶ್ವನಾಥ ಭಟ್ ಅವರು ಬಾಳೆಕೊಚ್ಚಿ ಪರಿಸರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮನೆಗಳೇ ಹೆಚ್ಚಾಗಿದ್ದು, ಸುಮಾರು 100 ಅಧಿಕ ಕುಟುಂಬಗಳು ಇಲ್ಲಿ ವಾಸಿಸುತ್ತಿದೆ. 300ಕ್ಕೂ ಅಧಿಕ ಮತದಾರರಿದ್ದಾರೆ. ಆದರೆ ಕಾವುವಿನಿಂದ ಈಶ್ವರಮಂಗಲ ಸಂಪರ್ಕದ ಜಿಲ್ಲಾ ಪಂಚಾಯತ್ ರಸ್ತೆಯು ಸಂಪೂರ್ಣವಾಗಿ ಹದೆಗೆಟ್ಟಿದ್ದು, ಸಂಚಾರಕ್ಕೆ ಯೋಗ್ಯವಿಲ್ಲದಾಗಿದೆ.
ರಸ್ತೆ ದುರಸ್ತಿಗೆ ಕಳೆದ 8 ವರ್ಷಗಳಿಂದ ಈ ಭಾಗದ ಜನತೆ ಮನವಿ ಸಲ್ಲಿಸುತ್ತಿದ್ದರೂ ನಮ್ಮ ಬೇಡಿಕೆಯನ್ನು ಪರಿಗಣಿಸಿಲ್ಲ. ಈ ರಸ್ತೆಯನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಡೆಗಣಿಸಿದ್ದಾರೆ. ನಾವು ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾದ್ದು, ಇದಕ್ಕಾಗಿ ಚುನಾವಣೆಯ ಬಹಿಷ್ಕಾರಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು. ಐವನ್ ಡಿ’ಸೋಜ ಅವರು ಸ್ಥಳೀಯರ ಮನವೊಲಿಸಿ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪುತ್ತೂರು ನಗರಸಭಾ ವಿಪಕ್ಷ ನಾಯಕ ಎಚ್. ಮಹಮ್ಮದ್ ಆಲಿ, ಪಕ್ಷದ ಮುಖಂಡರಾದ ಲೋಕೇಶ್ ಹೆಗ್ಡೆ, ಸತೀಶ್ ನಾಯ್ಕೆ, ರವಿಪ್ರಸಾದ್ ಶೆಟ್ಟಿ, ಅನ್ವರ್ ಖಾಸಿಂ, ಮುಖೇಶ್ ಕೆಮ್ಮಿಂಜೆ, ಲ್ಯಾನ್ಸಿ ಮಸ್ಕರೇನಸ್ ಮತ್ತಿತರರು ಉಪಸ್ಥಿತರಿದ್ದರು.








