ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡದಿಂದ ಉತ್ತಮ ಪ್ರದರ್ಶನ: ರವಿಶಾಸ್ತ್ರಿ ವಿಶ್ವಾಸ

ಸುಬ್ರಹ್ಮಣ್ಯ, ಫೆ.16: ಭಾರತ ಕ್ರಿಕೆಟ್ ತಂಡ ಬಲಿಷ್ಠ ತಂಡವಾಗಿದೆ. ಅನುಭವಿ ಮತ್ತು ಪ್ರತಿಭಾವಂತ ಆಟಗಾರರು ತಂಡದಲ್ಲಿದ್ದಾರೆ. ಬಲಾಢ್ಯ ತಂಡಗಳನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಮಾಜಿ ಕ್ರಿಕೆಟಿಗ ಮತ್ತು ಭಾರತೀಯ ಕ್ರಿಕೆಟ್ ತಂಡದ ನಿರ್ದೇಶಕ ರವಿಶಾಸ್ತ್ರಿ ಹೇಳಿದರು.
ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಅವರು ವಿಶೇಷ ಸೇವೆ ನೆರವೇರಿಸಿದ ಬಳಿಕ ಪತ್ರಕರ್ತರ ಜತೆ ಮಾತನಾಡಿದರು.
ಟೆಸ್ಟ್ ಮತ್ತು ಟ್ವೆಂಟಿ-20ಯಲ್ಲಿ ಭಾರತ ತಂಡ ನಂ.1 ಸ್ಥಾನದಲ್ಲಿದ್ದು , ಬಲಿಷ್ಟ ತಂಡವಾಗಿದೆ. ರಚನಾತ್ಮಕವಾಗಿ ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರಿದರೆ ತಂಡಕ್ಕೆ ಗೆಲುವು ಕಷ್ಟವಾಗಲಾರದು. ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ತೋರುವ ಎಲ್ಲಾ ಸಾಧ್ಯತೆ ಕಾಣುತ್ತಿದೆ. ಟ್ವೆಂಟಿ-20ಯಲ್ಲಿ ನಿರಂತರ ವಿಜಯ ಸಾಧಿಸುತ್ತಿರುವುದರಿಂದ ಇದೇ ಸಾಧನೆ ಮುಂದೆಯೂ ಮುಂದುವರೆಯಲಿದೆ ಎನ್ನುವುದು ನನ್ನ ವಿಶ್ವಾಸವಾಗಿದೆ ಎಂದರು.
ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಭೇಟಿ ನೀಡಿ ನರಸಿಂಹ ದೇವರ ದರ್ಶನ ಪಡೆದರು.ಇವರ ಜತೆ ವಾದಿರಾಜ ಪಿಜೆತ್ತಾಯ ಮತ್ತು ಲಾತವೀಯ ಆಚಾರ್ ಆಗಮಿಸಿದ್ದರು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಅವರನ್ನು ದೇವಳದ ಕಾರ್ಯನಿರ್ವಹಣಾಧಿಕಾರಿ ಪೂವಪ್ಪ ಸಿ.ಯು, ಶಿಷ್ಠಾಚಾರ ಅಧಿಕಾರಿ ಎ. ವೆಂಕಟ್ರಾಜ್ ಸ್ವಾಗತಿಸಿದರು.






