ನ್ಯಾಯಾಲಯದ ಆವರಣದಲ್ಲಿ ಥಳಿಸಿದ ಶಾಸಕನಿಗೆ ಬಿಜೆಪಿ ಪೂರ್ಣ ಬೆಂಬಲ
ಹೊಸದಿಲ್ಲಿ, ಫೆ.16: ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್ ಬಂಧನದ ವಿರುದ್ಧ ದಿಲ್ಲಿಯ ಕೋರ್ಟ್ ಒಂದರ ಆವರಣದಲ್ಲಿ ಸೋಮವಾರ ಪ್ರತಿಭಟಿಸುತ್ತಿದ್ದ ಜೆಎನ್‌ಯು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆಗೈದಿದ್ದಾರೆನ್ನಲಾದ ದಿಲ್ಲಿಯ ಬಿಜೆಪಿ ಶಾಸಕ ಓಂ ಪ್ರಕಾಶ್ ಶರ್ಮರ ಸಂಪೂರ್ಣ ಬೆಂಬಲಕ್ಕೆ ಪಕ್ಷ ನಿಂತಿದ್ದು, ದಿಲ್ಲಿಯ ಬಿಜೆಪಿ ಘಟಕ 'ಶರ್ಮ ಏನೂ ತಪ್ಪು ಮಾಡಿಲ್ಲ'ವೆಂದು ಹೇಳಿದೆ.
ಶರ್ಮ 'ಬದ್ಮಾಶ್' (ಸಮಾಜ ವಿರೋಧಿ ವ್ಯಕ್ತಿ) ಅಲ್ಲ, ಎಂದು ದಿಲ್ಲಿ ಬಿಜೆಪಿ ಘಟಕದ ಮಾಧ್ಯಮ ಸಂಚಾಲಕ ಪ್ರವೀಣ್ ಶಂಕರ್ ಕಪೂರ್ ಹೇಳಿದ್ದಾರೆ. ''ಶರ್ಮ ಪಕ್ಷಕ್ಕೆ ವಿವರಿಸಿದಂತೆ ಕೋರ್ಟಿನ ಆವರಣದಲ್ಲಿದ್ದವರು ಅವರೊಂದಿಗೆ ಅನುಚಿತವಾಗಿ ವರ್ತಿಸಿ ನಂತರ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು. ಅವರು ವಿರೋಧಿಸಿದಾಗ, ಒಬ್ಬ ವ್ಯಕ್ತಿ ಅವರ ತಲೆಗೆ ಹಲ್ಲೆ ನಡೆಸಿದ್ದಕ್ಕೆ ಅವರು (ಶರ್ಮ)ಪ್ರತಿಕ್ರಿಯಿಸಿದರು,''ಎಂದು ಕಪೂರ್ ಹೇಳಿದ್ದಾರೆ.
''ಅವರ ಹೇಳಿಕೆಯನ್ನು ಗಮನಿಸಿದರೆ ಅವರೇನೂ ತಪ್ಪು ಮಾಡಿಲ್ಲವೆಂದು ನನಗನಿಸುತ್ತದೆ. ದಿಲ್ಲಿ ಬಿಜೆಪಿ ಅವರೊಂದಿಗಿದೆ, ಎಂದು ಅವರು ಪುನರುಚ್ಚರಿಸಿದ್ದಾರೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಎಬಿವಿಪಿ, ಬಿಜೆಪಿಯು ಉದ್ದೇಶಪೂರ್ವಕವಾಗಿ ದಿಲ್ಲಿಯಲ್ಲಿ ಭಯದ ವಾತಾವರಣ ನಿರ್ಮಿಸಲಾಗುತ್ತಿದೆಯೆಂದು ಹೇಳಿವೆ.
ಈ ಹಿಂದೊಮ್ಮೆ ಶರ್ಮ ಚಾಂದ್‌ನಿ ಚೌಕದ ಎಎಪಿ ಶಾಸಕಿ ಅಲ್ಕಾ ಲಾಂಬರವರನ್ನು ಅವಮಾನಿಸಿ ವಿವಾದಕ್ಕೆ ಕಾರಣರಾಗಿದ್ದರು. ಸೋಮವಾರದ ಘಟನೆಗೆ ಪ್ರತಿಕ್ರಿಯಿಸಿದ ಲಾಂಬ ಶರ್ಮರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. ''ಬಿಜೆಪಿ ಅಧಿಕಾರದಲ್ಲಿದೆಯೆಂದ ಮಾತ್ರಕ್ಕೆ ಅವರನ್ನು ಸುಮ್ಮನೆ ಬಿಡಬಾರದು,'' ಎಂದು ಅವರು ಹೇಳಿದ್ದಾರೆ.





