ಜೆಎನ್‌ಯು ವಿವಾದ ಸಂಸತ್‌ನಲ್ಲಿ ಚರ್ಚೆಗೆ ಸಿದ್ಧ : ಸರ್ವಪಕ್ಷ ಸಭೆಯಲ್ಲಿ ಕೇಂದ್ರದ ಕೊಡುಗೆ

ಹೊಸದಿಲ್ಲಿ,ಫೆ.16: ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಹೈದರಾಬಾದ್‌ನ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಮುಂಬರುವ ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷಗಳೊಂದಿಗೆ ಚರ್ಚಿಸಲು ಸಿದ್ಧವಿರುವುದಾಗಿ ಕೇಂದ್ರ ಸರಕಾರ ಮಂಗಳವಾರ ತಿಳಿಸಿದೆ. ಬಜೆಟ್ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಹೊಸಲ್ಲಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ, ಕೇಂದ್ರ ಸಂಸದೀಯ ವ್ಯವಹಾರ ಸಚಿವ ಎಂ.ವೆಂಕಯ್ಯ ನಾಯ್ಡು ಮಾತನಾಡಿ, ‘‘ ಪ್ರತಿಪಕ್ಷಗಳು ಎತ್ತಿರುವ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸರಕಾರ ಇನ್ನೂ ಅನೇಕ ಹೆಜ್ಜೆಗಳನ್ನು ಮುಂದಿಡಲಿದೆಯೆಂದರು. ದೇಶದ ಶಿಕ್ಷಣಸಂಸ್ಥೆಗಳ ಸ್ವಾಯತ್ತತೆಯನ್ನು ರಕ್ಷಿಸುವಂತೆ ಹಾಗೂ ಕಾಪಾಡುವಂತೆ ಪ್ರತಿಪಕ್ಷಗಳು ಸಭೆಯಲ್ಲಿ ಕೇಂದ್ರ ಸರಕಾರವನ್ನು ಆಗ್ರಹಿಸಿದವು. ಜೆಎನ್‌ಯು ಬಿಕ್ಕಟ್ಟಿಗೆ ಸಂಬಂಧಿಸಿ ಸರಕಾರವು ಸಂಘರ್ಷಾತ್ಮಕ ಹೇಳಿಕೆಗಳನ್ನು ನೀಡುತ್ತಿದೆಯೆಂದು ಆಪಾದಿಸಿದರು.
ಸಂವಿಧಾನದ ಮೇಲೆ ನಂಬಿಕೆಯಿಡದ ವಿದ್ಯಾರ್ಥಿಗಳಿಂದ ತಾನು ದೂರವಿರುವುದಾಗಿ ಕಾಂಗ್ರೆಸ್ ಸಭೆಯಲ್ಲಿ ತಿಳಿಸಿತು. ಆದರೆ ದೇಶದ್ರೋಹದ ಆರೋಪ ಹೊರಿಸಲ್ಪಟ್ಟಿರುವ ಕನ್ಹಯ್ಯ ಕುಮಾರ್‌ಯಾವುದೇ ದೇಶವಿರೋಧಿ ಹೇಳಿಕೆ ನೀಡಿಲ್ಲವೆಂದು ಅದು ವಾದಿಸಿತು. ಆದಾಗ್ಯೂ ಮಹತ್ವದ ಜಿಎಸ್‌ಟಿ ವಿಧೇಯಕದಂತಹ ಮಹತ್ವದ ವಿಧೇಯಕಗಳನ್ನು ಬೆಂಬಲಿಸುವ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಲು ನಿರಾಕರಿಸಿದೆ. ಆದರೆ ಜೆಎನ್‌ಯು ವಿದ್ಯಾರ್ಥಿಗಳ ಬಂಧನವನ್ನು ಸಚಿವ ವೆಂಕಯ್ಯ ನಾಯ್ಡು ಸಮರ್ಥಿಸಿದ್ದಾರೆ. ವಿವಿಯ ಆವರಣದೊಳಗೆ ಪ್ರವೇಶಿಸಲು ಪೊಲೀಸರಿಗೆ ಅಕಾಶ ನೀಡಬಾರದೆಂದು ಕೆಲವರು ಹೇಳುತ್ತಾರೆ. ಆದರೆ, ಏನಾದರೂ ಅವಘಡ ಸಂಭವಿಸಿದಲ್ಲಿ ಯಾರು ಹೊಣೆ ಹೊತ್ತುಕೊಳ್ಳುವರು ಎಂದವರು ಪ್ರಶ್ನಿಸಿದರು.
ಆಡಳಿತ ಪಕ್ಷದ ನಾಯಕರು ಹಾಗೂ ಸಚಿವರಿಂದಾಗಿ ದೇಶದ ವಾತಾವರಣ ಕಲುಷಿತಗೊಂಡಿದೆಯೆಂದು ಆರೋಪಿಸಿದ ಆಝಾದ್, ಇಂತಹ ನಾಯಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಫೆಬ್ರವರಿ 23ರಿಂದ ಬಜೆಟ್ ಅಧಿವೇಶನ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸಭೆಯನ್ನು ಕರೆದಿದ್ದರು.
ಮುಂಬರುವ ಬಜೆಟ್ ಅಧಿವೇಶನದಲ್ಲಿ ಸರಕಾರವು ಪಠಾಣ್‌ಕೋಟ್ ಭಯೋತ್ಪಾದಕ ದಾಳಿ ಪ್ರಕರಣ, ಭಾರತ-ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಗೆ ಸಂಬಂಧಿಸಿ ಸರಕಾರದ ದ್ವಂದ್ವ ನಿಲುವು, ಅರುಣಾಚಲಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಮತ್ತಿತರ ವಿಷಯಗಳೂ ಸದನದಲ್ಲಿ ಭಾರೀ ಕೋಲಾಹಲವನ್ನು ಚರ್ಚಿಸುವ ನಿರೀಕ್ಷೆಯಿದೆ.
ಜೆಎನ್‌ಯು ಬಿಕ್ಕಟ್ಟು: ಮಧ್ಯಪ್ರವೇಶಿಸುವಂತೆ ಮೋದಿ ಪ್ರತಿಪಕ್ಷಗಳ ಆಗ್ರಹ
ದೇಶದ್ರೋಹದ ಆರೋಪದಲ್ಲಿ ಬಂಧಿತನಾದ ಜವಾಹರಲಾಲ್ ನೆಹರೂ ವಿವಿ ವಿದ್ಯಾರ್ಥಿ ಕನ್ಹಯ್ಯಾಲಾಲ್ ಬಂಧನದ ಹಿನ್ನೆಲೆಯಲ್ಲಿ ಜೆಎನ್‌ಯು ವಿವಿಯಲ್ಲಿ ಉದ್ಭವಿಸಿರುವ ಗಂಭೀರ ಬಿಕ್ಕಟ್ಟನ್ನು ನಿವಾರಿಸಲು ಮಧ್ಯಪ್ರವೇಶಿಸುವಂತೆ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಗೆಮಂಗಳವಾರ ಸರ್ವಪಕ್ಷಸಭೆಯಲ್ಲಿ ಮನವಿ ಮಾಡಿವೆ. ಅವರ ಬೇಡಿಕೆಗೆ ಸ್ಪಂದಿಸಿದ ಪ್ರಧಾನಿ, ತಾನು ಕೇವಲ ಒಂದು ಪಕ್ಷದ ನಾಯಕನಲ್ಲ, ಬದಲಿಗೆ ಇಡೀ ದೇಶದ ನಾಯಕನಾಗಿದ್ದು, ಬಿಕ್ಕಟ್ಟು ನಿವಾರಣೆಗೆ ಪ್ರಯತ್ನಿಸುವುದಾಗಿ ಹೇಳಿದರು.







