ಮೂಡುಬಿದಿರೆ: ಬಡಗಮಿಜಾರು- ಅರ್ಚಕರ ಜನಿವಾರ ತುಂಡು ಮಾಡಿ ಹಲ್ಲೆ, ದೂರು ದಾಖಲು
ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯ ಬಡಗ ಮಿಜಾರಿನ ಕೊಪ್ಪದ ಕುಮೇರು ನಿವಾಸಿಯಾಗಿರುವ ವ್ಯಕ್ತಿಯೋರ್ವ ನೆರೆಮನೆಯ ಅರ್ಚಕರೊರ್ವರ ಜರಿವಾರವನ್ನು ತುಂಡು ಮಾಡಿದ್ದಲ್ಲದೆ ಪಕ್ಕದಲ್ಲೇ ಇದ್ದ ಇನ್ನೊರ್ವ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ. .
ಹಲ್ಲೆಗೊಳಗಾದ ವ್ಯಕ್ತಿ ಸ್ಥಳೀಯ ಕೊಪ್ಪದಕುಮೇರು ನಿವಾಸಿ, ವೃತ್ತಿಯಲ್ಲಿ ಕೂಲಿ ಕಾರ್ಮಿಕರಾದ ದಿನೇಶ್ ಪೂಜಾರಿ(33) ಎಂದು ತಿಳಿದುಬಂದಿದೆ. ತನ್ನ ದೊಡ್ಡಪ್ಪನ ಮರಣದ ಹಿನ್ನೆಲೆಯಲ್ಲಿ ಏನಾದರು ದೋಷ ಇದೆಯೆ ಎಂದು ತಿಳಿದುಕೊಳ್ಳಲು ಅವರು ಸೋಮವಾರ ನೆರೆಯ ಗುರುರಾಜ್ ಭಟ್ ಅವರ ಮನೆಗೆ ಹೋಗಿದ್ದರು. ಇದನ್ನು ನೋಡಿದ ನೆರೆಮನೆಯ ರವಿ ದೇವಾಡಿಗ ಅಲ್ಲಿಗೆ ಬಂದು ನೀನು ಇಲ್ಲಿ ಜನ ಸೇರಿಸುತ್ತೀಯ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅರ್ಚಕರ ಜನಿವಾರ ಎಳೆದು ತುಂಡು ಮಾಡಿ ಕೆನ್ನೆಗೆ ಹೊಡೆದರೆನ್ನಲಾಗಿದೆ. ತಡೆಯಲು ಬಂದ ದಿನೇಶ್ ಪೂಜಾರಿಯತ್ತ ಕಲ್ಲು ಮತ್ತು ಕತ್ತಿಯನ್ನು ಎಸೆದುದರಿಂದ ಕಾಲಿಗೆ ರಕ್ತಗಾಯವಾಗಿರುತ್ತದೆ. ಗಾಯಾಳು ಮೂಡುಬಿದಿರೆಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.
ಆರೋಪಿ ರವಿ ದೇವಾಡಿಗ ಈ ಹಿಂದೆ ಕೋಟೆಬಾಗಿಲಿನ ಸುಭಾಸ್‌ನಗರದಲ್ಲಿ ವಾಸವಾಗಿದ್ದು ಅಲ್ಲಿಯು ಇದೇ ರೀತಿ ಸ್ಥಳಿಯರೊಂದಿಗೆ ನಿತ್ಯ ಜಗಳಕ್ಕಿಳಿದು ಅಶಾಂತಿ ಸೃಷ್ಟಿಸುತ್ತಿದ್ದ ಎನ್ನಲಾಗಿದೆ. ಕರ್ತವ್ಯ ನಿರತ ಪೊಲೀಸರ ಮೇಲು ಹಲ್ಲೆ ನಡೆಸಿದ್ದ ಎನ್ನಲಾಗಿದ್ದು ಈತನ ಬಗ್ಗೆ ಮೂಡುಬಿದಿರೆ ಪೊಲೀಸ್‌ಠಾಣೆಯಲ್ಲಿ ಕೆಲವು ಪ್ರಕರಣ ದಾಖಲಾಗಿತ್ತು. ತದನಂತರ ಆತ ಬಡಗಮಿಜಾರಿಗೆ ಸ್ಥಳಾಂತರಗೊಂಡಿದ್ದ ಎನ್ನಲಾಗಿದೆ.





