ಚುಟುಕು ಸುದ್ದಿಗಳು
ಕರಾಮು ವಿವಿ ಘಟಿಕೋತ್ಸವ
ಉಡುಪಿ, ಫೆ.16: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 16ನೆ ವಾರ್ಷಿಕ ಘಟಿಕೋತ್ಸವವನ್ನು ಮಾರ್ಚ್/ಎಪ್ರಿಲ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. 2015ರ ಮೇ-ಜೂನ್ ಒಳಗೆ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಘಟಿಕೋತ್ಸವಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ..
ಕರಾಮು ವಿವಿ ವೆಬ್‌ಸೈಟ್ ಡಿಡಿಡಿ.ಟ್ಠಞಟ್ಟಛಿ.ಛಿಛ್ಠ.ಜ್ಞಿನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಕರಾಮು ವಿವಿ ಪ್ರಾದೇಶಿಕ ಕೇಂದ್ರ ಉಡುಪಿಯಲ್ಲಿ ಪಡೆಯಬಹುದು. ದಂಡ ಶುಲ್ಕವಿಲ್ಲದೆ ಫೆ.25ರಂದು ಹಾಗೂ 100 ರೂ. ದಂಡ ಶುಲ್ಕದೊಡನೆ ಮಾರ್ಚ್ 5 ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ ದೂ.ಸಂ.: 0821-2519942ನ್ನು ಸಂಪರ್ಕಿಸಬಹುದು ಎಂದು ಕರಾಮು ವಿವಿ ಉಡುಪಿ ಪ್ರಾದೇಶಿಕ ಕೇಂದ್ರ ಪ್ರಕಟನೆಯಲ್ಲಿ ತಿಳಿಸಿದೆ.
ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ
ಉಡುಪಿ, ಫೆ.16: ಕರ್ನಾಟಕ ಜಾನಪದ ಅಕಾಡಮಿ 2015ರ ಜನವರಿ 1ರಿಂದ ಡಿ.31ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ ಕನಿಷ್ಠ 150 ಪುಟಗಳ ಮಿತಿಯಲ್ಲಿರುವ, ಜಾನಪದ ಗದ್ಯ-ಪದ್ಯ, ವಿಚಾರ-ವಿಮರ್ಶೆ, ಸಂಶೋಧನೆ ಹಾಗೂ ಸಂಕೀರ್ಣ ಈ ನಾಲ್ಕು ಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿಯಲ್ಲಿ ಜಾನಪದ ಕೃತಿಗಳನ್ನು 2015ನೆ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಿದೆ.
ಲೇಖಕರು, ಪ್ರಕಾಶಕರು, ಸಂಪಾದಕರು ಜಾನಪದಕ್ಕೆ ಸಂಬಂಧಿಸಿದ 4 ಕೃತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡಮಿ, 2ನೆ ಮಹಡಿ, ಕನ್ನಡ ಭವನ, ಜೆ.ಸಿ ರಸ್ತೆ ಬೆಂಗಳೂರು-560002 ಇವರಿಗೆ ಫೆ.29ರೊಳಗೆ ಖುದ್ದಾಗಿ, ಕೊರಿಯರ್ ಅಥವಾ ಅಂಚೆ ಮೂಲಕ ಕಳುಹಿಸಿಕೊಡಬಹುದು. ಹೆಚ್ಚಿನ ಮಾಹಿತಿಗಾಗಿ ಅಕಾಡಮಿಯ ದೂರವಾಣಿ ಸಂಖ್ಯೆ:080-22215509ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆೆ ತಿಳಿಸಿದೆ.
ಫೆಲೋಶಿಪ್‌ಗೆ ಅರ್ಜಿ ಆಹ್ವಾನ
ಉಡುಪಿ, ಫೆ.16: ಕರ್ನಾಟಕ ಜಾನಪದ ಅಕಾಡೆಮಿಯಿಂದ ‘ಜಾನಪದ ಕ್ಷೇತ್ರ’ದಲ್ಲಿ ಹೆಚ್ಚಿನ ಸಂಶೋಧನೆ/ಅಧ್ಯಯನ ಮಾಡುವ ಸಲುವಾಗಿ ಕಲಾವಿದರು ಸೇರಿದಂತೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಧ್ಯಯನದ ಅವಧಿ 8 ತಿಂಗಳುಗಳಾಗಿದ್ದು, ಅಧ್ಯಯನ ಮಾಡುವವರು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರಬೇಕು.
ಅಧ್ಯಯನ ಮಾಡುವ ಅಭ್ಯರ್ಥಿಗಳು ವಿವರಗಳನ್ನು ಫೆ.25ರೊಳಗೆ ಕಳುಹಿಸಿ ಕೊಡಬಹುದು. ಅಧ್ಯಯನದ ವಿಷಯಗಳು ಹೀಗಿವೆ. ಚಂಡಮಂಡಲ ಆಚರಣೆ-ಮಂಟೇಸ್ವಾಮಿ ಸಂಪ್ರದಾಯ, ಕರಗ-ಕೊಂಡದ ಆಚರಣೆ, ಜಗ್ಗಲಿಗೆ -ಪ್ರಕಾರದ ಅಧ್ಯಯನ, ನೀಲಗಾರರ ಪದಗಳಲ್ಲಿ ಸಾಮಾಜಿಕತೆ, ಲಂಬಾಣಿ ನೃತ್ಯ ಹಾಡುಗಳು, ಮಳೆರಾಯನ ಪದಗಳು- ಜೋಕುಮಾರಸ್ವಾಮಿ ಸಂಪ್ರದಾಯ, ತತ್ವ ಪದಗಳು- ಸಾಮಾಜಿಕ ಸಮಾನತೆಯ ಆಶಯಗಳು, ಕೈವಾರ ತಾತಯ್ಯ- ತತ್ವ ಪದಗಳು, ಭೂತಕೋಲ, ಸೂಫಿ ಪರಂಪರೆ, ಜಾನಪದ ಆಚರಣೆಗಳು ಇತ್ಯಾದಿ.
ಹೆಚ್ಚಿನ ವಿವರ ಹಾಗೂ ಅರ್ಜಿಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡಮಿ, 2ನೆ ಮಹಡಿ, ಕನ್ನಡ ಭವನ, ಜೆ.ಸಿ ರಸ್ತೆ ಬೆಂಗಳೂರು-560002 ದೂರವಾಣಿ ಸಂಖ್ಯೆ 222215509 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಇಂದಿನಿಂದ ಧರ್ಮ ನೇಮೋತ್ಸವ
ಮಂಗಳೂರು, ೆ.16: ಸುರತ್ಕಲ್ ಇಡ್ಯಾ ಪಣಂಬೂರು ಶ್ರೀ ಕಾಂತೇರಿ ಧೂಮಾವತಿ ದೈವಸ್ಥಾನದಲ್ಲಿ ಶ್ರೀ ಕಾಂತೇರಿ ಧೂಮಾವತಿ ಹಾಗೂ ಪರಿವಾರ ದೈವಗಳ ಧರ್ಮನೇಮೋತ್ಸವ ೆ. 17ರಿಂದ 19ರ ತನಕ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಿತಿ ಅಧ್ಯಕ್ಷ ಕೆ. ಸದಾಶಿವ ಶೆಟ್ಟಿ, 19ರಂದು ಸಂಜೆ 4ರಿಂದ ಮೂಲ ಮಹಿಷಾಂದಾಯ ದೈವಕ್ಕೆ ಧರ್ಮನೇಮ, ರಾತ್ರಿ 8ರಿಂದ ಶ್ರೀ ಕಾಂತೇರಿ ಧೂಮಾವತಿ ಪರಿವಾರ ದೈವಗಳಿಗೆ ಧರ್ಮನೇಮೋತ್ಸವ, ಸಾರಳ ಧೂಮಾವತಿ, ಬಂಟ, ಜಾರಂದಾಯ, ಬಂಟ, ಬಬ್ಬರ್ಯ, ಅಣ್ಣಪ್ಪ ಪಂಜುರ್ಲಿ ದೈವದ ಧರ್ಮನೇಮ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.
18ರಂದು ಶ್ರೀ ನಾಗದೇವರಿಗೆ ನಮಕ ಪ್ರಧಾನ, ಕಲಶಾಭಿಷೇಕ, ಆಶ್ಲೇಷ ಬಲಿಪೂಜೆ ನಡೆಯಲಿದೆ. 20ರಂದು ಶ್ರೀ ಕಾಂತೇರಿ ಧೂಮಾವತಿ ದೈವಸ್ಥಾನದಲ್ಲಿ ಶ್ರೀ ಸತ್ಯದೇವತೆ, ಕಲ್ಲುರ್ಟಿ ಪಂಜುರ್ಲಿ ಹಾಗೂ ರಾಹುಗುಳಿಗ ದೈವಗಳಿಗೆ ಕೋಲ ನಡೆಯಲಿದೆ ಎಂದು ಸದಾಶಿವ ಶೆಟ್ಟಿ ತಿಳಿಸಿದರು.
ಕ್ಷೇತ್ರದ ಮೊಕ್ತೇಸರ ಮಂಜು ಕಾವೂರು, ಗೌರವಾಧ್ಯಕ್ಷರಾದ ಖಂಡಿಗೆಬೀಡು ಆದಿತ್ಯ ಮುಕ್ಕಾಲ್ದಿ, ಪುಂಡಲೀಕ ಹೊಸಬೆಟ್ಟು, ಸುಧಾಕರ ಕಾಮತ್ ಉಪಸ್ಥಿತರಿದ್ದರು.
ಫೆ.27ರಂದು ‘ಅನಾಫಿಲೀಸ್’ ಕಿರುಚಿತ್ರ ಬಿಡುಗಡೆ ಸಮಾರಂಭ
ಮಂಗಳೂರು, ೆ.16: ದೇವಿಪ್ರಕಾಶ್ ಉರ್ವಸ್ಟೋರ್ ನಿರ್ದೇಶನದ ‘ಅನಾಫಿಲೀಸ್’ ಕಿರುಚಿತ್ರ ಬಿಡುಗಡೆ ಸಮಾರಂಭ ೆ.27ರಂದು ಉರ್ವಾಸ್ಟೋರ್ ಬಾಬೂಜಿನಗರದ ಅಂಗನವಾಡಿ ಕೇಂದ್ರದ ಬಯಲಿನಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ದೇವಿಪ್ರಕಾಶ್, ಶೂನ್ಯ ಬಜೆಟ್‌ನಲ್ಲಿ ನಿರ್ಮಿಸಿರುವ ಈ ಚಿತ್ರ 57 ನಿಮಿಷಗಳನ್ನು ಒಳಗೊಂಡಿದೆ ಎಂದರು.
ಅನಾಫಿಲೀಸ್ ಮಲೇರಿಯಾ ರೋಗ ಹರಡುವ ಹೆಣ್ಣು ಸೊಳ್ಳೆಯನ್ನೇ ಮೂಲವಾಗಿಸಿಕೊಂಡು ಅದಕ್ಕೆ ಕಾರಣವಾಗುವ ಅಂಶಗಳ ಮೂಲಕ ಪರಿಸರದ ಬಗ್ಗೆ ಕಾಳಜಿಯನ್ನು ಮೂಡಿಸುವ ಪ್ರಯತ್ನ ಹಾಗೂ ಮನುಷ್ಯ ಸಂಬಂಧಗಳನ್ನು ವಿಭಿನ್ನವಾಗಿ ಪ್ರಸ್ತುತಪಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಚಿತ್ರಕಥೆಯ ಸಂಕ್ಷಿಪ್ತ ವಿವರ ನೀಡಿದರು. ಸಹ ನಿರ್ದೇಶಕ ಶಶಿಧರ್ ಎದುರ್ತೋಡು, ಸೂರಜ್ ಮಂಗಳೂರು, ಸಚಿನ್‌ಕುಮಾರ್, ಸುರೇಶ್ ಉಪಸ್ಥಿತರಿದ್ದರು.
ಚುನಾವಣಾ ಬಹಿಷ್ಕಾರದಿಂದ ಹಿಂದೆ ಸರಿದ ಮತದಾರರು
ಬೆಳ್ತಂಗಡಿ, ಫೆ.16: ಗ್ರಾಮದಲ್ಲಿ ನಡೆಯದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದ ತಣ್ಣಿರುಪಂತ ಗ್ರಾಮದ ಪಾಲೇದು ಅಭಿವೃದ್ಧ್ದಿ ಸಮಿತಿಯವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಈ ವಿಚಾರವನ್ನು ಸಮಿತಿಯವರು ಸೋಮವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಮೂಲಕ ಪ್ರಕಟಿಸಿದರು. ಕಳೆದ ಜ.11ರಂದು ಪಾಲೇದಿನಲ್ಲಿ ಗ್ರಾಮಸ್ಥರಿಂದ ಮೂಲಭೂತ ಸೌಕರ್ಯಗಳ ಬೇಡಿಕೆಗಾಗಿ ಈ ಬಾರಿಯ ತಾ.ಪಂ., ಜಿ.ಪಂ. ಚುನಾವಣೆಯನ್ನು ಬಹಿಷ್ಕರಿಸುವುದಾಗಿ ನಿರ್ಧರಿಸಿ ಪ್ರತಿಭಟನೆಯನ್ನು ನಡೆಸಲಾಗಿತ್ತು. ಈ ಪ್ರತಿಭಟನೆಯ ನಂತರ ಸಂಸದ ನಳೀನ್ ಕುಮಾರ್‌ಕಟೀಲು, ಶಾಸಕರಾದ ವಸಂತ ಬಂಗೇರ, ಕೋಟ ಶ್ರೀನಿವಾಸ ಪೂಜಾರಿ ಅವರುಗಳು ಭೇಟಿ ನೀಡಿ ಸೂಕ್ತ ಭರವಸೆ ನೀಡಿರುವುದರಿಂದ ಬಹಿಷ್ಕಾರವನ್ನು ಹಿಂತೆಗೆಯುವುದಾಗಿ ಮತ್ತು ಮುಕ್ತ ಚುನಾವಣೆಗೆ ಅವಕಾಶ ಮಾಡಿಕೊಡುವುದಾಗಿ ಗ್ರಾಮಸ್ಥರು ತೀರ್ಮಾನಿಸಿದ್ದಾರತೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಶ್ಯಾಂ, ಉಪಾಧ್ಯಕ್ಷರಾದ ಹರಿಪ್ರಸಾದ್, ಲತೀಫ್, ಮಾಧವ, ಕಾರ್ಯದರ್ಶಿಗಳಾದ ಅನಿಲ್ ಪಾಲೇದು, ದಿನೇಶ್ ನಾಯಕ್, ಲಕ್ಷ್ಮಣ ಉಪಸ್ಥಿತರಿದ್ದರು.
‘ಕಾನೂನು ಬಾಹಿರ ಹಣವನ್ನು ಮುಖ್ಯವಾಹಿನಿಗೆ ತರಲು ಅವಕಾಶವಿದೆ’
ಪುತ್ತೂರು, ಫೆ.16: ಕಾನೂನು ಬಾಹಿರವಾಗಿ ಸಂಪಾದಿಸಿದ ಹಣವನ್ನು ಮುಖ್ಯವಾಹಿನಿಗೆ ತರುವುದಕ್ಕೆ ಅವಕಾಶವಿದೆ. ಜೀವವಿಮೆ, ಎನ್‌ಜಿಒ, ಸೇವಾಸಂಸ್ಥೆಗಳು ಮಾತ್ರವಲ್ಲದೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಣ ತೊಡಗಿಸುವುದು ಈ ಕಾನೂನಿನ ಮುಖ್ಯ ಅಂಶವಾಗಿದೆ ಎಂದು ಮುಂಬೈಯ ಗ್ರೇಟ್ ಬಾಂಬೆ ಕೋ-ಆಪರೇಟಿವ್ ಬ್ಯಾಂಕ್‌ನ ಹಿರಿಯ ಪ್ರಬಂಧಕ ವೆಂಕಟೇಶ್ ಪ್ರಭು ಹೇಳಿದರು.
ಇಲ್ಲಿನ ವಿವೇಕಾನಂದ ಕಾಲೇಜಿನ ಎಂ.ಕಾಂ.ವಿಭಾಗವು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಆ್ಯಂಟಿ ಮನಿ ಲಾಂಡ್ರಿಂಗ್’ ವಿಷಯದಲ್ಲಿ ಅವರು ವಿಚಾರ ಮಂಡಿಸಿದರು.
ಪ್ರಸ್ತುತ ಚಿನ್ನದ ಠೇವಣಿಗೆ ಸರಕಾರ ಅವಕಾಶ ಕಲ್ಪಿಸಿದ್ದು, ನಮ್ಮಲ್ಲಿರುವ ಚಿನ್ನಾಭರಣಗಳನ್ನು ಬ್ಯಾಂಕ್ ಖಾತೆಯಲ್ಲಿಡಬಹುದು. ಇದಕ್ಕೆ ಪ್ರತಿಯಾಗಿ ಚಿನ್ನದ ವೌಲ್ಯಕ್ಕೆ ಅನುಗುಣವಾಗಿ ಬಡ್ಡಿ ದರವನ್ನು ಪಡೆಯಬಹುದು. ಆದರೆ ಠೇವಣಿಯಾಗಿಟ್ಟ ಒಡವೆಗಳು ನಂತರ ಅದೇ ರೂಪದಲ್ಲಿ ಪಡೆಯಲಾಗುವುದಿಲ್ಲ. ಬದಲಿಗೆ ಚಿನ್ನದ ನಾಣ್ಯ ಅಥವಾ ಆ ವೌಲ್ಯದ ನಗದನ್ನು ಮಾತ್ರ ಪಡೆಯಬಹುದು ಎಂದು ವೆಂಕಟೇಶ್ ಪ್ರಭು ನುಡಿದರು.
ಎಂ.ಕಾಂ.ವಿಭಾಗದ ಮುಖ್ಯಸ್ಥೆ ವಿಜಯಾ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿ ಉಪನ್ಯಾಸ ಮಂಡಳಿಯ ಸಂಚಾಲಕಿ ರಶ್ಮಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಕ್ಷಾ ಎ.ಆರ್. ಪ್ರಾರ್ಥಿಸಿದರು. ವಿದ್ಯಾರ್ಥಿನಿ ಚೈತ್ರಾ ಕೆ.ಎಸ್. ಸ್ವಾಗತಿಸಿದರು. ವಿದ್ಯಾರ್ಥಿ ಕಾರ್ತಿಕ್ ವಂದಿಸಿದರು. ವಿದ್ಯಾರ್ಥಿನಿಯರಾದ ನಯನಾ ಜಿ. ಹಾಗೂ ಪ್ರಶಾಂತಿ ಎ. ಕಾರ್ಯಕ್ರಮ ನಿರೂಪಿಸಿದರು.
‘ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ’
ಉಡುಪಿ, ಫೆ.16: ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಹಣಬಲ, ತೋಳ್ಬಲ ಹಾಗೂ ಜಾತಿ ಲೆಕ್ಕಾಚಾರದಲ್ಲಿ ಈ ಬಾರಿಯ ಜಿಪಂ ಹಾಗೂ ತಾಪಂ ಚುನಾವಣೆಗೆ ಸೀಟು ಹಂಚಿಕೆ ಮಾಡಿದ್ದು, ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಿವೆ. ಹೀಗಾಗಿ ಈ ಎರಡೂ ಪಕ್ಷಗಳಿಗೆ ಜನರು ಈ ಬಾರಿ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪೆರ್ಡೂರು ಜಿಪಂ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಣ್ಣಯ್ಯ ನಾಯಕ್ ಪಟ್ಲ ಹೇಳಿದ್ದಾರೆ.
ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸಂವಿಧಾನಕ್ಕೆ ಅಪಚಾರ ಎಸಗಿರುವ ಈ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿ, ಸಾಮಾಜಿಕ ನ್ಯಾಯ ಹಾಗೂ ಜಾತ್ಯತೀತ ತತ್ವಗಳಿಗೆ ಬದ್ಧವಾಗಿರುವ ಜೆಡಿಎಸ್ ಬೆಂಬಲಿಸುವಂತೆ ಅವರು ಮತದಾರರಲ್ಲಿ ಮನವಿ ಮಾಡಿದರು.
ಜೋಕಟ್ಟೆ: ಅಂಜುಮನ್‌ಖುವ್ವತುಲ್ ಇಸ್ಲಾಂನ 48ನೆ ವಾರ್ಷಿಕೋತ್ಸವ
ಮಂಗಳೂರು, ಫೆ. 16: ಜೋಕಟ್ಟೆಯ ಅಂಜುಮಾನ್ ಖುವ್ವತುಲ್ ಇಸ್ಲಾಂನ 48ನೆ ವಾರ್ಷಿಕೋತ್ಸವದ ಅಂಗವಾಗಿ ಅಂಜುಮಾನ್ ಯತೀಂ ಮತ್ತು ಮಸಾಕೀನ್ ಸೆಂಟರ್‌ನ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ರಿಫಾಯಿ ರಾತೀಬ್ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳು ಫೆ.17ರಿಂದ 21ರವರೆಗೆ ನಡೆಯಲಿವೆ.
ಫೆ. 17ರಂದು ರಾತ್ರಿ 8:30ಕ್ಕೆ ಜೋಕಟ್ಟೆಯ ಮುಹಿಯುದ್ದೀನ್ ಹೊಸ ಜುಮಾ ಮಸೀದಿಯ ಖತೀಬ್ ಇ.ಎಂ.ಅಬ್ದುರ್ರಹ್ಮಾನ್ ದಾರಿಮಿ ಅಲ್ ಹಾಮಿದಿ ದುಆದೊಂದಿಗೆ ಜೋಕಟ್ಟೆಯ ಮುಹಿಯುದ್ದೀನ್ ಹಳೆ ಜುಮಾ ಮಸೀದಿಯ ಖತೀಬ್ ಹಾಜಿ ಎ.ಎಂ.ಅಬ್ದುಲ್ಲಾ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮೂಡಬಿದ್ರೆ ಮುಹಿಸ್ಸುನ್ನಃ ದರ್ಸ್‌ನ ಮುದರ್ರಿಸ್ ನೌಫಲ್ ಸಖಾಫಿ ಕಳಸ ಪ್ರವಚನ ನೀಡಲಿದ್ದಾರೆ. 18ರಂದು ತನ್ಯಾಪುರಂನ ಅಲಿ ಅಕ್ಬರ್ ಬಾಖವಿ ಹಾಗೂ 19ರಂದು ಮಲಪ್ಪುರಂನ ಮನ್‌ಹಾಜುರ್ರಶಾದ್ ಇಸ್ಲಾಮಿಕ್ ಕಾಲೇಜಿನ ಪ್ರಾಂಶುಪಾಲ ಜಾಬಿರ್ ಹುದವಿ ತ್ರಿಕರಿಪುರ ಅವರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
20ರಂದು ನಡೆಯುವ ಯತೀಂ ಮತ್ತು ಮಸಾಕೀನ್ ಸೆಂಟರ್ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಯನ್ನು ಜೋಕಟ್ಟೆ ಈದ್ಗಾ ಜುಮಾ ಮಸೀದಿಯ ಖತೀಬ್ ಪಿ.ಎಂ.ಅಬ್ದುಲ್ಲಾಹಿ ನಈಮಿ ನೆರವೇರಿಸಲಿದ್ದಾರೆ. ಅಸ್ಸೈಯದ್ ಕೆ.ಎಸ್.ಅಲಿ ತಂಙಳ್ ಕುಂಬೋಳ್ ದುಆಗೈಯುವರು.
21ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಜೆ 4:30ಕ್ಕೆ ಜೋಕಟ್ಟೆ ಯಹ್ಯಾ ಉಸ್ತಾದ್ ನೇತೃತ್ವದಲ್ಲಿ ಅಂಜುಮಾನ್ ಯತೀಂ ಖಾನದಲ್ಲಿ ದಫ್ ರಾತೀಬ್ ಹಾಗೂ ಸಂಜೆ 7 ಗಂಟೆಗೆ ಹೊಸ ಜುಮಾ ಮಸೀದಿಯಲ್ಲಿ ನಡೆಯುವ ರಿಫಾಯಿ ರಾತೀಬ್ ಕಾರ್ಯಕ್ರಮದ ನೇತೃತ್ವವನ್ನು ಆತೂರು ಬದ್ರಿಯಾ ಜುಮಾ ಮಸೀದಿಯ ಮುದರ್ರಿಸ್ ಅಸ್ಸೈಯದ್ ಜುನೈದ್ ಜಿಫ್ರಿ ಮುತ್ತುಕೋಯ ತಂಙಳ್ ವಹಿಸಲಿದ್ದಾರೆ.
ಉಪ ಚುನಾವಣೆಯಲ್ಲಿ ಗೆಲುವು: ಪುತ್ತೂರಿನಲ್ಲಿ ಬಿಜೆಪಿ ಹರ್ಷಾಚರಣೆ
ಪುತ್ತೂರು, ಫೆ.16: ಹೆಬ್ಬಾಳ ಮತ್ತು ದೇವದುರ್ಗ ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಮಂಗಳವಾರ ಪುತ್ತೂರು ಬಿಜೆಪಿ ಕಚೇರಿ ಮುಂಭಾಗದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷಾಚರಣೆ ಮಾಡಿದರು.
ಈ ಸಂದಭರ್ದಲ್ಲಿ ಬಿಜೆಪಿ ಪುತ್ತೂರು ಮಂಡಲ ಸಮಿತಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಸದಸ್ಯ ರಾಜೇಶ್ ಬನ್ನೂರು, ಪಕ್ಷದ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.







