ಭಾರತ ಸಮಗ್ರ ಚಾಂಪಿಯನ್, ಶ್ರೀಲಂಕಾ ದ್ವಿತೀಯ, ಪಾಕ್ ತೃತೀಯ

ದಕ್ಷಿಣ ಏಷ್ಯನ್ ಗೇಮ್ಸ್‌ಗೆ ತೆರೆ
ಶಿಲ್ಲಾಂಗ್,ಫೆ.16: ದಕ್ಷಿಣ ಏಷ್ಯನ್ ಗೇಮ್ಸ್‌ನ ಅಂತಿಮ ದಿನವಾದ ಮಂಗಳವಾರವೂ ಪ್ರಾಬಲ್ಯ ಮೆರೆದ ಆತಿಥೇಯ ಭಾರತ ತಂಡ ಒಟ್ಟು 308 ಪದಕಗಳನ್ನು ಜಯಿಸುವುದರೊಂದಿಗೆ ಸತತ 12ನೆ ಬಾರಿ ಸಮಗ್ರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಮಹಿಳಾ ಬಾಕ್ಸರ್‌ಗಳು ಎಲ್ಲ ಮೂರೂ ಚಿನ್ನದ ಪದಕಗಳನ್ನು ಜಯಿಸಿದರೆ, ಜುಡೋಗಳು ತಲಾ 2 ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಭಾರತ ಒಟ್ಟು 188 ಚಿನ್ನ, 99 ಬೆಳ್ಳಿ ಹಾಗೂ 30 ಕಂಚಿನ ಪದಕಗಳನ್ನು ಬಾಚಿಕೊಂಡಿದೆ.
ಭಾರತ ಈ ಬಾರಿ ಪದಕ ಪಟ್ಟಿಯಲ್ಲಿ ಭಾರೀ ಏರಿಕೆ ಕಂಡಿದೆ. 2010ರಲ್ಲಿ ಭಾರತ 90 ಚಿನ್ನ ಸಹಿತ ಒಟ್ಟು 175 ಪದಕಗಳನ್ನು ಜಯಿಸಿತ್ತು.
ಈ ಬಾರಿಯ ಗೇಮ್ಸ್‌ನಲ್ಲಿ ಶ್ರೀಲಂಕಾ(186 ಪದಕಗಳು, 25 ಚಿನ್ನ, 63 ಬೆಳ್ಳಿ, 98 ಕಂಚು) ಎರಡನೆ ಸ್ಥಾನವನ್ನು ಪಡೆದರೆ, ಪಾಕಿಸ್ತಾನ(106 ಪದಕ, 12 ಚಿನ್ನ, 37 ಬೆಳ್ಳಿ, 57 ಕಂಚು) ಮೂರನೆ ಸ್ಥಾನ ಪಡೆದಿದೆ.
ಅಂತಿಮ ದಿನದ ಸ್ಪರ್ಧೆಯಲ್ಲಿ ಬಾಕ್ಸರ್‌ಗಳು ಹಾಗೂ ಜುಡೋಗಳು ಫೈನಲ್ ಪಂದ್ಯವನ್ನು ಆಡಿದರು. ಸೋಮವಾರ ಪುರುಷ ಬಾಕ್ಸರ್‌ಗಳು 10 ಪದಕಗಳನ್ನು ಜಯಿಸಿದ್ದರು. ಮಂಗಳವಾರ ಮಹಿಳೆಯರು ಎಲ್ಲ 3 ಪದಕಗಳನ್ನು ಜಯಿಸಿ ಕ್ಲೀನ್‌ಸ್ವೀಪ್ ಸಾಧಿಸಿದರು.
ಭಾರತದ ಮಹಿಳಾ ಬಾಕ್ಸರ್‌ಗಳ ಅಪೂರ್ವ ಸಾಧನೆ
ಶಿಲ್ಲಾಂಗ್‌ನಲ್ಲಿ ನಡೆದ ದಕ್ಷಿಣ ಏಷ್ಯನ್ ಗೇಮ್ಸ್‌ನ ಬಾಕ್ಸಿಂಗ್ ಫೈನಲ್‌ನಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳಾದ ಎಂಸಿ ಮೇರಿಕೋಮ್, ಪೂಜಾ ರಾಣಿ ಹಾಗೂ ಸವಿತಾ ರಾಣಿ ಚಿನ್ನದ ಪದಕವನ್ನು ಜಯಿಸಿದ್ದಾರೆ. ಈ ಮೂಲಕ ಗೇಮ್ಸ್‌ನಲ್ಲಿ ಮಹಿಳಾ ಬಾಕ್ಸರ್‌ಗಳು ಕ್ಲೀನ್‌ಸ್ವೀಪ್ ಸಾಧಿಸಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಮೇರಿ ಕೋಮ್(51ಕೆಜಿ) ಶಕ್ತಿಶಾಲಿ ಪಂಚ್‌ನ ಮೂಲಕ ಶ್ರೀಲಂಕಾದ ಎದುರಾಳಿ ಅನುಷಾ ಕೆ.ದಿಲ್‌ರುಕ್ಶಿ ಅವರನ್ನು ಮಣಿಸಿ ಚಿನ್ನದ ಪದಕ ಜಯಿಸಿದರು.
ಭುಜನೋವಿನಿಂದ ಚೇತರಿಸಿಕೊಂಡು ಸಕ್ರಿಯ ಬಾಕ್ಸಿಂಗ್‌ಗೆ ಮರಳಿರುವ ಮೇರಿಕೋಮ್ ಪಂಚ್‌ಗೆ ಎದುರಾಳಿ ಅನುಷಾ ಎಡವಿ ಬಿದ್ದಿಲ್ಲದೆ ಬಲಗಾಲಿನ ಮಂಡಿನೋವಿಗೆ ಒಳಗಾದರು. ಚಿಕಿತ್ಸೆಯ ನಂತರ ಹೋರಾಟವನ್ನು ಮುಂದುವರಿಸಿದರು.
ಇಂಚಿಯೋನ್ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿರುವ ಪೂಜಾ ರಾಣಿ ದೇವಿ 75 ಕೆಜಿ ವಿಭಾಗದಲ್ಲಿ ನಿಲಂಥಿ ಅವರನ್ನು ಕೇವಲ ಒಂದೇ ಸುತ್ತಿನಲ್ಲಿ ಸೋಲಿಸಿದರು.
ಒಂದು ವರ್ಷ ನಿಷೇಧವನ್ನು ಪೂರೈಸಿ ಬಾಕ್ಸಿಂಗ್ ರಿಂಗ್‌ಗೆ ವಾಪಸಾಗಿರುವ ಸರಿತಾದೇವಿ ಶ್ರೀಲಂಕಾದ ಎದುರಾಳಿ ಎಂ. ವಿದುಶಿಕಾ ಪ್ರಾಬಾಧಿ ಅವರಿಂದ ಕಠಿಣ ಸವಾಲು ಎದುರಿಸಿದರು. ಮೊದಲೆರಡು ಸುತ್ತಿನಲ್ಲಿ ಸರಿತಾ ಮೇಲುಗೈ ಸಾಧಿಸಿದ್ದರು. ಆದರೆ, ಮೂರನೆ ಸುತ್ತಿನಲ್ಲಿ ವಿದುಶಿಕಾ ತಿರುಗೇಟು ನೀಡಿದರು. ಅಂತಿಮವಾಗಿ ಸರಿತಾದೇವಿ 39-36ಅಂತರದಿಂದ ಪ್ರಯಾಸದ ಗೆಲುವು ದಾಖಲಿಸಿದರು.
ಗೇಮ್ಸ್‌ನಲ್ಲಿ ಬಾಕ್ಸರ್‌ಗಳು ಒಟ್ಟು 10 ಚಿನ್ನದ ಪದಕವನ್ನು ಜಯಿಸಿ ತಮ್ಮ ಅಭಿಯಾನ ಕೊನೆಗೊಳಿಸಿದರು.
ಜುಡೋಗಳಿಂದ ಉತ್ತಮ ಸಾಧನೆ: ಭಾರತದ ಜುಡೋಗಳು ಗೇಮ್ಸ್‌ನ ಕೊನೆಯ ದಿನವಾದ ಮಂಗಳವಾರ ತಲಾ 2 ಚಿನ್ನ ಹಾಗೂ ಬೆಳ್ಳಿ ಪದಕವನ್ನು ಜಯಿಸುವುದರೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ.
ಪುರುಷರ 90ಕೆಜಿ ವಿಭಾಗದಲ್ಲಿ ಅವತಾರ್ ಸಿಂಗ್ ಕೇವಲ 49 ಸೆಕೆಂಡ್‌ನಲ್ಲಿ ಅಫ್ಘಾನ್‌ನ ಎದುರಾಳಿ ಮುಹಮ್ಮದ್ ಇಸ್ಮೈಲ್ ಕಾಕರ್‌ರನ್ನು ಮಣಿಸಿ ಚಿನ್ನದ ಪದಕವನ್ನು ಗೆದ್ದುಕೊಂಡರು.
ಮತ್ತೊಂದೆಡೆ, ಮಹಿಳೆಯರ ಅಂಡರ್ 70 ಕೆಜಿ ವಿಭಾಗದಲ್ಲಿ ಪೂಜಾ ಅವರು ಪಾಕಿಸ್ತಾನದ ಬೀನಿಶ್ ಕಾನ್‌ರನ್ನು 3:03 ನಿಮಿಷಗಳ ಹೋರಾಟದಲ್ಲಿ ಮಣಿಸಿದರು.ಮಹಿಳೆಯರ ಅಂಡರ್-78ಕೆಜಿ ವಿಭಾಗದಲ್ಲಿ ಭಾರತದ ಅರುಣಾ(200 ಅಂಕ) ಪಾಕ್‌ನ ಫೌಝಿಯಾ ಮುಮ್ತಾಜ್(210) ವಿರುದ್ಧ ಸೋತರು.
ಪುರುಷರ ಅಂಡರ್-100 ಕೆಜಿ ವಿಭಾಗದಲ್ಲಿ ಶುಭಂ ಕುಮಾರ್ ಪಾಕಿಸ್ತಾನದ ಹುಸೈನ್ ಷಾ ವಿರುದ್ಧ ಕೇವಲ 1 ನಿಮಿಷ, 29 ಸೆಕೆಂಡ್‌ನಲ್ಲಿ ಸೋಲುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಭಾರತದ ಜೂಡೊಗಳು ಒಟ್ಟಾರೆ 12 ಸ್ಪರ್ಧೆಗಳಲ್ಲಿ 9 ಚಿನ್ನ, 3 ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.
ಮಹಿಳೆಯರ ಬಾಕ್ಸಿಂಗ್ ಫೈನಲ್‌ನಲ್ಲಿ ಹೈಡ್ರಾಮಾ
ಶಿಲ್ಲಾಂಗ್, ಫೆ.16: ಸಂಘಟನಾ ಸಮಿತಿಯು ವೇತನದಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಎಐಬಿಎಯಿಂದ ನೇಮಿಸಲ್ಪಟ್ಟಿರುವ ಹಂಗಾಮಿ ಸಮಿತಿಯ ಅಧಿಕಾರಿಗಳು ಟೂರ್ನಿಯಿಂದ ಹೊರಗುಳಿಯುವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಈ ನಾಟಕೀಯ ಬೆಳವಣಿಗೆಯಿಂದಾಗಿ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಬಾಕ್ಸಿಂಗ್ ಫೈನಲ್ ಪಂದ್ಯ 40 ನಿಮಿಷ ತಡವಾಗಿ ಆರಂಭವಾಯಿತು.
‘‘ತಾಂತ್ರಿಕ ಅಧಿಕಾರಿಗಳ ದಿನಭತ್ಯೆಯನ್ನು ಹೆಚ್ಚಿಸಬೇಕು ಎಂದು ಎಐಬಿಎಯಿಂದ ನೇಮಿಸಲ್ಪಟ್ಟಿರುವ ಅಧಿಕಾರಿಗಳು ಆಗ್ರಹಿಸುವ ಮೂಲಕ ನಮ್ಮನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ನಾವು ಪ್ರತಿ ದಿನದ ಭತ್ತೆಯನ್ನು 50 ಯುಎಸ್ ಡಾಲರ್ ಎಂದು ನಿಗದಿಪಡಿಸಿದ್ದೇವೆ. ಆದರೆ, ಅವರು ಇನ್ನೂ ಹೆಚ್ಚಿಸಬೇಕೆಂದು ಒತ್ತಡ ಹಾಕುತ್ತ್ತಿದ್ದಾರೆ. ಕೊನೆಗೂ ಈ ಸಮಸ್ಯೆ ನಿವಾರಣೆಯಾಗಿದೆ’’ಎಂದು ಶಿಲ್ಲಾಂಗ್ ಸಂಘಟನಾ ಸಮಿತಿಯ ಸಿಇಒ ಆರ್.ಕೆ. ಶರ್ಮ ತಿಳಿಸಿದರು.
ಗೇಮ್ಸ್‌ನ ಅಂತಿಮ ದಿನದಾದ ಮಂಗಳವಾರ ತೀರ್ಪುಗಾರರು ಹಾಗೂ ತಾಂತ್ರಿಕ ಅಧಿಕಾರಿಗಳು ವೇತನ ವಿಷಯವನ್ನು ಮುಂದಿಟ್ಟುಕೊಂಡು ಫೈನಲ್ ಪಂದ್ಯದಿಂದ ಹೊರಗುಳಿಯುವುದಾಗಿ ಬೆದರಿಕೆ ಹಾಕಿದ್ದರು. ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಜೊತೆ ಕಾರ್ಯದರ್ಶಿ ರಾಕೇಶ್ ಗುಪ್ತಾ ಸಮ್ಮುಖದಲ್ಲೇ ‘ನಮ್ಮ ವೇತನ ಪಾವತಿಸಿ’ ಎಂದು ಪ್ರತಿಭಟನಾಕಾರರು ಆಗ್ರಹಿಸತೊಡಗಿದರು.
ಬಾಕ್ಸಿಂಗ್ ಇಂಡಿಯಾದ ಆಡಳಿತವನ್ನು ಇಂಟರ್‌ನ್ಯಾಶನಲ್ ಬಾಕ್ಸಿಂಗ್ ಅಸೋಸಿಯೇಶನ್‌ನ (ಎಐಬಿಎ) ಹಂಗಾಮಿ ಸಮಿತಿ ನೋಡಿಕೊಳ್ಳುತ್ತಿದೆ
ದಕ್ಷಿಣ ಏಷ್ಯನ್ ಗೇಮ್ಸ್ ಹೈಲೈಟ್ಸ್
*ಈಶಾನ್ಯ ಭಾರತದ ವೈವಿಧ್ಯಮಯ ಸಂಸ್ಕೃತಿ ಅನಾವರಣ, ಸುಡುಮದ್ದುಗಳ ಸಿಡಿಸುವ ಮೂಲಕ 12 ದಿನಗಳ ಕಾಲ ನಡೆದ ದ.ಏಷ್ಯನ್ ಗೇಮ್ಸ್‌ಗೆ ವರ್ಣರಂಜಿತ ತೆರೆ ಎಳೆಯಲಾಯಿತು.
* ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೋನೊವಾಲಾ ‘ಗೇಮ್ಸ್ ಮುಕ್ತಾಯದ’ ಘೋಷಣೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಫೆ.5 ರಂದು ಗೇಮ್ಸ್‌ನ್ನು ಉದ್ಘಾಟಿಸಿದ್ದರು.
* 13ನೆ ಆವೃತ್ತಿಯ ಗೇಮ್ಸ್ ನೇಪಾಳದಲ್ಲಿ ನಡೆಯಲಿದೆ. ಎಸ್‌ಎಒಸಿ ಅಧ್ಯಕ್ಷ ಎನ್. ರಾಮಚಂದ್ರನ್ ನೇಪಾಳದ ಜೀವನ್ ರಾಮ್‌ಗೆ ಗೇಮ್ಸ್ ಧ್ವಜ ಹಸ್ತಾಂತರಿಸಿದರು.
* ಭಾರತ 188 ಚಿನ್ನ, 99 ಬೆಳ್ಳಿ, 30 ಕಂಚಿನ ಪದಕವನ್ನು ಜಯಿಸಿ ಸಮಗ್ರ ಚಾಂಪಿಯನ್ ಎನಿಸಿಕೊಂಡಿದೆ.
*ಒಟ್ಟು 186 ಪದಕಗಳನ್ನು ಜಯಿಸಿದ ಶ್ರೀಲಂಕಾ ಎರಡನೆ ಸ್ಥಾನ ಪಡೆಯಿತು.







