ರಣಜಿ ಟ್ರೋಫಿ: ಮಧ್ಯಪ್ರದೇಶದ ಗೆಲುವಿಗೆ ಕಠಿಣ ಗುರಿ

ಸೂರ್ಯಕುಮಾರ್, ಆದಿತ್ಯ ತಾರೆ ಶತಕ
ಕಟಕ್, ಫೆ.16: ಸೂರ್ಯಕುಮಾರ್ ಯಾದವ್ ಹಾಗೂ ಆದಿತ್ಯ ತಾರೆ ಬಾರಿಸಿದ ಆಕರ್ಷಕ ಶತಕಗಳ ಸಹಾಯದಿಂದ ಮುಂಬೈ ತಂಡ ಮಧ್ಯಪ್ರದೇಶ ತಂಡಕ್ಕೆ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದ ಗೆಲುವಿಗೆ 571 ರನ್ ಗುರಿ ನೀಡಿದೆ.
ಬೆರಳುನೋವಿನಿಂದಾಗಿ ಕಳೆದ ಪಂದ್ಯದಿಂದ ಹೊರಗುಳಿದಿದ್ದ ತಾರೆ 199 ಎಸೆತಗಳಲ್ಲಿ 16 ಬೌಂಡರಿ ಹಾಗೂ 1 ಸಿಕ್ಸರ್‌ಗಳನ್ನು ಒಳಗೊಂಡ 109 ರನ್ ಸಿಡಿಸಿದರು. 199 ಎಸೆತಗಳನ್ನು ಎದುರಿಸಿದ್ದ ಸೂರ್ಯಕುಮಾರ್ 20 ಬೌಂಡರಿ ಹಾಗೂ 1 ಸಿಕ್ಸರ್‌ಗಳ ಸಹಿತ 115 ರನ್ ಗಳಿಸಿದರು.
ನಾಲ್ಕನೆ ದಿನವಾದ ಮಂಗಳವಾರ ಮುಂಬೈ ತಂಡ 3 ವಿಕೆಟ್ ನಷ್ಟಕ್ಕೆ 285 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿತು. ಐದನೆ ವಿಕೆಟ್‌ಗೆ 217 ರನ್ ಜೊತೆಯಾಟ ನಡೆಸಿದ ತಾರೆ ಹಾಗೂ ಸೂರ್ಯಕುಮಾರ್,ಔಟಾಗದೆ 73 ರನ್ ಗಳಿಸಿದ ಅಭಿಷೇಕ್ ನಾಯರ್ ಮುಂಬೈ ತಂಡ 2ನೆ ಇನಿಂಗ್ಸ್‌ನಲ್ಲಿ 426 ರನ್ ಗಳಿಸಲು ನೆರವಾದರು. ಮೊದಲ ಇನಿಂಗ್ಸ್‌ನಲ್ಲಿ 154 ರನ್ ಮುನ್ನಡೆ ಸಾಧಿಸಿದ್ದ ಮುಂಬೈ ತಂಡ ಮಧ್ಯಪ್ರದೇಶದ ಗೆಲುವಿಗೆ 571 ರನ್ ಕಠಿಣ ಸವಾಲು ನೀಡಿತು.
ಮಿಂಚಿನ ವೇಗದಲ್ಲಿ ಅರ್ಧಶತಕ ಸಿಡಿಸಿದ ಶ್ರೇಯಸ್ ಐಯ್ಯರ್(58 ರನ್, 46 ಎಸೆತ, 9 ಬೌಂಡರಿ, 1 ಸಿಕ್ಸರ್) ರಣಜಿ ಟ್ರೋಫಿ ಋತುವಿನಲ್ಲಿ 1,200ಕ್ಕೂ ಅಧಿಕ ರನ್ ಗಳಿಸಿದ ಐದನೆ ಆಟಗಾರನೆಂಬ ಕೀರ್ತಿಗೆ ಭಾಜನರಾದರು.
ಮುಂಬೈ ತಂಡ ರಣಜಿ ಟ್ರೋಫಿ ಸೆಮಿಫೈನಲ್ ಇತಿಹಾಸದಲ್ಲಿ ಎದುರಾಳಿ ತಂಡದ ಗೆಲುವಿಗೆ 2ನೆ ಗರಿಷ್ಠ ಮೊತ್ತವನ್ನು ನೀಡಿದೆ. 2009-10ರಲ್ಲಿ ಕರ್ನಾಟಕ ತಂಡ ಉತ್ತರ ಪ್ರದೇಶದ ಗೆಲುವಿಗೆ 615 ರನ್ ನಿಗದಿಪಡಿಸಿತ್ತು.
ಗೆಲ್ಲಲು ಕಠಿಣ ಗುರಿ ಪಡೆದಿದ್ದ ಮಧ್ಯಪ್ರದೇಶ ತಂಡ ನಾಲ್ಕನೆ ದಿನದಾಟದಂತ್ಯಕ್ಕೆ 32 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ. ಆದಿತ್ಯ ಶ್ರೀವಾಸ್ತವ(ಔಟಾಗದೆ 53 ರನ್, 102 ಎಸೆತ, 9 ಬೌಂಡರಿ) ನಮನ್ ಓಜಾರೊಂದಿಗೆ(14) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಐದನೆ ಹಾಗೂ ಅಂತಿಮ ದಿನವಾದ ಬುಧವಾರ ಮಧ್ಯಪ್ರದೇಶ ತಂಡ ಉಳಿದ 8 ವಿಕೆಟ್‌ಗಳ ನೆರವಿನಿಂದ ಇನ್ನೂ 472 ರನ್ ಗಳಿಸಬೇಕಾಗಿದೆ.
ಸಂಕ್ಷಿಪ್ತ ಸ್ಕೋರ್
ಮುಂಬೈ ಪ್ರಥಮ ಇನಿಂಗ್ಸ್: 371 ರನ್
ಮಧ್ಯಪ್ರದೇಶ ಪ್ರಥಮ ಇನಿಂಗ್ಸ್: 227
ಮುಂಬೈ ದ್ವಿತೀಯ ಇನಿಂಗ್ಸ್: 426 ರನ್‌ಗೆ ಆಲೌಟ್
(ಸೂರ್ಯಕುಮಾರ್ ಯಾದವ್ 115, ಆದಿತ್ಯ ತಾರೆ 109, ಅಭಿಷೇಕ್ ನಾಯರ್ ಔಟಾಗದೆ 73, ಈಶ್ವರ ಪಾಂಡೆ 3-103, ದಾಟೆ 2-48, ಹರ್‌ಪ್ರೀತ್ ಸಿಂಗ್ 3-55)
ಮಧ್ಯಪ್ರದೇಶ ದ್ವಿತೀಯ ಇನಿಂಗ್ಸ್: 99/2
(ಶ್ರೀವಾಸ್ತವ ಔಟಾಗದೆ 53, ಸಕ್ಸೇನಾ 25, ನಮನ್ ಓಜಾ ಔಟಾಗದೆ 14)







