ಇಲ್ಲವಾದ ಹನುಮಂತಪ್ಪನಿಗೆ ಟಿ.ಎನ್. ಸೀತಾರಾಂ ಪತ್ರ

ಯೋಧ ಹನುಮಂತಪ್ಪ ಮತ್ತು ಇತರ ಅಂಥ ಯೋಧರಿಗೊಂದು ತಲುಪಲಾಗದ ಪತ್ರ,
ಇಲ್ಲ ಹನುಮಂತಪ್ಪ... ನಿನ್ನ ಬಗ್ಗೆಯಾಗಲಿ ನಿನ್ನ ಹಾಗೇ ಸೈನ್ಯದಲ್ಲಿ ಸೇವೆ ಸಲ್ಲಿಸುವವರ ಬಗ್ಗೆ ನಾನು ಹೆಚ್ಚು ಯೋಚಿಸಿರಲೇ ಇಲ್ಲ?.
ಸ್ವಲ್ಪ ಯೋಚಿಸಿರಬಹುದು.. ಆದರೆ ನೀವು ಪ್ರತಿದಿನ ಹಾದು ಹೋಗುವ ನರಕಗಳು ಗೊತ್ತಾಗುವಷ್ಟು ಅಲ್ಲ.. ನಮಗೆಲ್ಲಾ ಚಳಿ ಅಂದರೆ ಸ್ವೆಟರ್? ಇನ್ನೂ ಹೆಚ್ಚಿನ ಚಳಿ ಅಂದರೆ ಅದರ ಜತೆಗೆ ಇನ್ನೊಂದು ರಗ್ಗು.. ಆದರೆ ನನಗೆ ಇವತ್ತು ಅರ್ಥವಾಗುತ್ತಿದೆ? ನಿಮ್ಮ ಚಳಿಯೇ ಬೇರೆ? ನಾವು ಅನುಭವಿಸುವ ಚಳಿಯೇ ಬೇರೆ? ನಾವು ಕಂಫರ್ಟ್ ರೆನ್‌ನಲ್ಲಿ ನಿಮ್ಮಗಳ ರಕ್ಷಣೆಯಲ್ಲಿ ಬದುಕಿದ್ದೇವೆ. ನಮಗೆ ಚಳಿ ಅನೇಕ ವೇಳೆ ಆನಂದ ಕೂಡ ತರಬಲ್ಲದು. ಆದರೆ ನಿಮಗೆ?
ಮೈನಸ್ 50 ಡಿಗ್ರಿಯಂತೆ ಆ ಸಿಯಾಚಿನ್‌ನಲ್ಲಿ. 5 ಡಿಗ್ರಿ ಬಂದರೆ ನಾವು ತಡೆಯಲಾರೆವು. ಸೊನ್ನೆ ಡಿಗ್ರಿ ಬಂದರೆ ನಾವು ಎಗರಾಡಿಬಿಡುತ್ತೇವೆ.. ಸೊನ್ನೆ ಡಿಗ್ರಿಗಿಂತ ಸ್ವಲ್ಪ ಕಡಿಮೆಯಾದರೂ ಸಾಕು.. ಅರ್ಧ ಗಂಟೆ ಕೂಡ ನಾವು ಬದುಕಲಾರೆವು ಎಂದು ಬೊಬ್ಬೆ ಹೊಡೆಯುತ್ತೇವೆ. ಆದರೆ ಅಲ್ಲಿ ನೀವು... ಶತ್ರುಗಳ ಭೀಕರ ಶಸ್ತ್ರಗಳನ್ನು ಎದುರಿಸುತ್ತಾ ಮೈನಸ್ 45 ಡಿಗ್ರಿ ಚಳಿಯಲ್ಲಿ ವರ್ಷಗಟ್ಟಲೆ ಬದುಕುತ್ತೀರಿ?
ಅಲ್ಲಿ ಒಂದು ಅಡುಗೆಯೇ ಅಥವಾ ಸ್ನಾನವೇ.. ಸಾಧ್ಯವೇ ಇಲ್ಲ? ಅಪ್ಪ ಹನುಮಂತಪ್ಪ ನೀನಂತೂ, 25 ಅಡಿ ಹಿಮದ ಕೆಳಗೆ 6 ದಿನ ಸಿಕ್ಕಿಕೊಂಡು ಬದುಕಿದ್ದೆ.. ಯಾರಿಗಾಗಿ..? ನೀನು ಗಡಿ ಕಾಯದಿದ್ದರೆ, ದೇಶ ಉಳಿಸದಿದ್ದರೆ ನನ್ನಂಥವರ ಸುಖ ಉಳಿಯುತ್ತಾ.. ಯಾವತ್ತೂ ಇಲ್ಲದಷ್ಟು ಪಾಪ ಪ್ರಜ್ಞೆ ನನ್ನನ್ನು ಇವತ್ತು ಕಾಡ ಹತ್ತಿದೆ? ನಿನಗೇನು ಕೋಟಿ ಕೋಟಿ ರೂಪಾಯಿ ಸಂಬಳ ಕೊಡುತ್ತಾರಾ ಹೀಗೆ ಪ್ರತಿಕ್ಷಣ ಸಾವಿನ ಜೊತೆ ಬದುಕಲು... ಸಾವಿರದಲ್ಲಿ ಒಂದರಷ್ಟು ಕೂಡಾ ಇಲ್ಲ..
ಮೋಸಗಾರರಿಗೆ, ಸುಪಾರಿ ಕೊಲೆಗಡುಕರಿಗೆ, ಭ್ರಷ್ಟ ರಾಜಕಾರ ಣಿಗಳಿಗೆ, ನಿಷ್ಕರುಣಿ ವ್ಯಾಪಾರಸ್ಥರಿಗೆ ಕೋಟಿ ಕೋಟಿ ಸಿಗುತ್ತಿದೆಯಲ್ಲ... ನೀನು ಅವರ ದಾರಿಯನ್ನು ಆರಿಸಿಕೊಳ್ಳ ಬಹುದಿತ್ತು.. ಸುಖಕ್ಕೆ ಸುಖವೂ ಇರುತ್ತಿತ್ತು.. ದುಡ್ಡಿಗೆ ದುಡ್ಡೂ ಇರುತ್ತಿತ್ತು.. ಉಹೂಂ.. ನೀನು ಆರಿಸಿಕೊಳ್ಳಲಿಲ್ಲ.. ನಿನಗೆ ಬೇಕಾಗಿರಲಿಲ್ಲ... ನಿನ್ನ ಥರದ ನಿನ್ನ ಸ್ನೇಹಿತರಿಗೆ ಬೇಕಾಗಿರಲಿಲ್ಲ.. ನಿಮಗೆ ಆ ಕೋಟಿ ಕಷ್ಟಗಳ ಮಧ್ಯೆ ತಾಯಿನಾಡನ್ನು ರಕ್ಷಿಸುವ ಕೆಲಸವೇ ಶ್ರೇಷ್ಠವೆಂದು ತೋರಿತು?.
6 ದಿನಗಳು ಅಲ್ಲಿದ್ದು ಬಂದು ಇವತ್ತು ಸತ್ತೂ ಹೋದೆಯಲ್ಲ ಹನುಮಂತಪ್ಪ... ನನಗೆ ನಿಜಕ್ಕೂ ಎಷ್ಟು ನಾಚಿಕೆಯಾಗುತ್ತಿದೆ ಬಲ್ಲೆಯಾ... ಐಹಿಕ ಆಸೆಗಳನ್ನು ಮೀರಿದವನನ್ನು ಸನ್ಯಾಸಿ ಅನ್ನುತ್ತೇವೆ.. ನಿಮ್ಮಗಳನ್ನು ಏನೆಂದು ಕರೆಯಬೇಕು ಹೇಳು.. ಆಸೆಗಳನ್ನು ಮೀರಿ, ಕೋಟಿ ಕಷ್ಟಗಳನ್ನು ತಬ್ಬಿ ಹಿಡಿದು ದೇಶ ಕಾಯುತ್ತಿದ್ದೀರಿ.. ನಮ್ಮಂತಹ ಸುಖ ಪಿಪಾಸುಗಳಿಗಿಂತ, ಆಸೆಯಿಲ್ಲದ ಸನ್ಯಾಸಿಗಿಂತ ಅತಿ ಎತ್ತರದ ಸ್ಥಾನ ಖಂಡಿತಾ ನಿಮ್ಮದಲ್ಲವೆ?.
ನಿಮಗೆಲ್ಲ ಹೇಗೆ ಅಷ್ಟು ದಟ್ಟವಾದ ಶ್ರದ್ಧೆ ಬರುತ್ತದೆ?? ನಿಮ್ಮ ಬಗ್ಗೆ ನಾವು ಪ್ರತಿ ದಿನ ಕೊಂಚವೂ ಯೋಚಿಸುವುದಿಲ್ಲವಲ್ಲ? ನಿಜಕ್ಕೂ ನಾಚಿಕೆಯಾಗುತ್ತಿದೆ... ನಿಮ್ಮ ಋಣವನ್ನು ನಾವು ತೀರಿಸಲು ಸಾಧ್ಯವೇ ಇಲ್ಲ ಹನುಮಂತಪ್ಪ... ನೀನು ಬದುಕಬೇಕು ಎಂದು ನಿನ್ನೆ ಅನೇಕ ಬಾರಿ ಪ್ರಾರ್ಥಿಸಿದೆ? ಅದೊಂದೇ ಸಮಾಧಾನ..





