ಕಪಟ 'ಗುರುವಿನ' ಆಶ್ರಮದಿಂದ ಐಐಟಿ-ಎಂ ವಿದ್ಯಾರ್ಥಿನಿಯ ರಕ್ಷಣೆ
ಚೆನ್ನೈ, ಫೆ.16: ಸನ್ಯಾಸಿಯಾಗುವ ಇಚ್ಛೆಯಿಂದ ಜ.17ರಂದು ನಿಗೂಢವಾಗಿ ಕಾಣೆಯಾಗಿದ್ದ ಐಐಟಿ-ಎಂ ವಿದ್ಯಾರ್ಥಿನಿಯೊಬ್ಬಳು ಕಳೆದ ವಾರ ಕೊನೆಗೂ ಡೆಹ್ರಾಡೂನ್ ಬಳಿ ಸ್ವಯಂ ಘೋಷಿತ ಗುರುವೊಬ್ಬನ ಆಶ್ರಮದಲ್ಲಿದ್ದ ಪತ್ತೆಯಾಗಿದ್ದಾಳೆ.
ವೇದಾಂತಂ ಎಲ್ ಪ್ರತ್ಯೂಷಾ ಎಂಬ ಸ್ನಾನಕೋತ್ತರ ಪದವಿ ವಿದ್ಯಾರ್ಥಿನಿಯನ್ನು ಉತ್ತರಾಂಚಲ ಪೊಲೀಸರು ಹಾಗೂ ಆಕೆಯ ಹೆತ್ತವರು ಶಿವಗುಪ್ತ ಎಂಬಾತನ ಆಶ್ರಮದಿಂದ ರಕ್ಷಿಸಿ ಕರೆ ತಂದಿದ್ದಾರೆ.
ತನ್ನ ಮಗಳೀಗ ಕುಟುಂಬದೊಂದಿಗಿದ್ದಾಳೆ. ಅವಳು ಕಾಣೆಯಾದೊಡನೆ ದಾಖಲಿಸಲಾಗಿರುವ ಪ್ರಕರಣವನ್ನು ಕೊನೆಗೊಳಿಸಬೇಕೆಂದು ಯುವತಿಯ ತಂದೆ ಪುರುಷೋತ್ತಮನ್ ಎಂಬವರು ಸೋಮವಾರ ಕೊಟ್ಟುರುಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
26ರ ಹರೆಯದ ಪ್ರತ್ಯೂಷಾ, ಅಧ್ಯಾತ್ಮದ ಶೋಧಕ್ಕಾಗಿ ತಾನು ಹಿಮಾಲಯಕ್ಕೆ ಹೋಗುತ್ತಿದ್ದೇನೆಂದು ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಪತ್ರಗಳಲ್ಲಿ ಬರೆದಿಟ್ಟು ಕಾಣೆಯಾಗಿದ್ದಳು.
ಹದಿಹರೆಯದವರೂ ಸೇರಿದಂತೆ ಇನ್ನೂ ಅನೇಕ ಹುಡುಗಿಯರು ಗುಪ್ತನ ಆಶ್ರಮದಲ್ಲಿದ್ದಾರೆಂದು ಪುರುಷೋತ್ತಮನ್ ತಮಗೆ ಮಾಹಿತಿ ನೀಡಿದ್ದಾರೆಂದು ಕೊಟ್ಟೂರುಪುರಂ ಪೊಲೀಸರು ತಿಳಿಸಿದ್ದಾರೆ. ಆದರೆ, ಗುಪ್ತನ ವಿರುದ್ಧ ಯಾರದೇ ದೂರು ಬರದ ಕಾರಣ ಉತ್ತರಾಂಚಲ ಪೊಲೀಸರು ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ. ಇತರ ಹುಡುಗಿಯರು ಹಾಗೂ ಮಹಿಳೆಯರು ಸ್ವ ಇಚ್ಛೆಯಿಂದಲೇ ಆಶ್ರಮದಲ್ಲಿರುವಂತೆ ಕಾಣುತ್ತಿದೆ.
ಪ್ರತ್ಯೂಷಾ, ಕೊಯಮತ್ತೂರಿನ ಭಾಸ್ಕರ ಗುಪ್ತ ಎಂಬವನೊಂದಿಗೆ ಮುಂಬೈಗೆ ಹೋಗುವ ರೈಲು ಹತ್ತಿರುವುದು ನಗರ ಪೊಲೀಸರಿಗೆ ತಿಳಿದು ಬಂದಿದೆಯೆಂದು ಜ.23ರಂದು ಟಿಒಐ ವರದಿ ಮಾಡಿತ್ತು. ಕಾಣೆಯಾದ ದಿನ ಆಕೆ ಗುಪ್ತನೊಂದಿಗೆ 5 ಬಾರಿ ಮಾತನಾಡಿದ್ದಳೆಂದು ವಿದ್ಯಾರ್ಥಿನಿಯ ಸೆಲ್‌ಫೋನ್ ದಾಖಲೆ ತಿಳಿಸಿತ್ತು.
ಪ್ರತ್ಯೂಷಾ ಇರುವಳೆಂದು ಆಕೆಯ ಫೋನ್ ದಾಖಲೆ ತೋರಿಸಿದ್ದ ಡೆಹ್ರಾಡೂನ್ ಸಮೀಪದ ಸ್ಥಳವೊಂದರ ಮನೆಯನ್ನೂ ಆಕೆಯ ಕುಟುಂಬ ಸದಸ್ಯರು ಹಾಗೂ ಉತ್ತರಾಂಚಲ ಪೊಲೀಸರು ಶೋಧಿಸಿದ್ದರು. ಕೊನೆಗೂ ಪ್ರತ್ಯೂಷಾ, ಗುಪ್ತನ ಆಶ್ರಮದಲ್ಲಿ ಪತ್ತೆಯಾದಳೆಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಗುಪ್ತ, ಪ್ರತ್ಯೂಷಾಳ ಬ್ರೈನ್‌ವಾಶ್ ಮಾಡಿದಂತಿತ್ತು. ಆಕೆ ಮೊದಲು ಮನೆಗೆ ಮರಳಲು ನಿರಾಕರಿಸಿದ್ದಳೆಂದು ಅವರು ಹೇಳಿದ್ದಾರೆ.





