ಹಲ್ಲೆಯನ್ನು ಸಮರ್ಥಿಸಿದ ಬಿಜೆಪಿ ಶಾಸಕ
ಹೊಸದಿಲ್ಲಿ, ಫೆ.16: ಪಟಿಯಾಲ ಹೌಸ್ ನ್ಯಾಯಾಲಯದ ಸಂಕೀರ್ಣದಲ್ಲಿ ಸೋಮವಾರ ವ್ಯಕ್ತಿಯೊಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿದ ದಿಲ್ಲಿ ಬಿಜೆಪಿ ಶಾಸಕ ಓ.ಪಿ.ಶರ್ಮಾ, ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಕೆಲವು ಮಂದಿಯ ಗುಂಪೊಂದು ತನಗೆ ಥಳಿಸಿದ್ದು, ಸಹಜವಾಗಿ ತಾನು ಅದಕ್ಕೆ ಪ್ರತಿಕ್ರಿಯಿಸಿದ್ದೇನೆಂದು ಅವರು ಹೇಳಿದ್ದಾರೆ.
ತಾನು ನ್ಯಾಯಾಲಯದಿಂದ ಹೊರಬರುತ್ತಿದ್ದಾಗ ಕೆಲವರು, ಪಾಕಿಸ್ತಾನದ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದುದು, ಘರ್ಷಣೆಗೆ ಕಾರಣವಾಗಿತ್ತೆಂದು ದಿಲ್ಲಿಯ ವಿಶ್ವಾಸ್‌ನಗರ್ ಕ್ಷೇತ್ರದ ಶಾಸಕರಾದ ಶರ್ಮಾ ಹೇಳಿದ್ದಾರೆ. ''ನಾನು ಅವರ ಘೋಷಣೆಗಳನ್ನು ಆಕ್ಷೇಪಿಸಿದಾಗ, ಅವರು ನನಗೆ ಹೊಡೆದು ಪರಾರಿಯಾದರು. ನಾನು ಮತ್ತಿತರರು, ಅವರನ್ನು ಬೆನ್ನಟ್ಟಿದ್ದೆವು. ಆನಂತರ ನಡೆದುದಕ್ಕೆಲ್ಲಾ ನಿಮ್ಮಲ್ಲಿ ಪುರಾವೆಯಿದೆ'' ಎಂದರು. ಛಾಯಾಚಿತ್ರಗಳಲ್ಲಿ ಜಾಕೆಟ್‌ಧಾರಿಯೊಬ್ಬ ಜನರನ್ನು ಥಳಿಸುತ್ತಿರುವುದನ್ನು ತೋರಿಸಲಾಗಿದ್ದು, ವಾಸ್ತವಾಗಿ ಆ ವ್ಯಕ್ತಿ ತಾನಲ್ಲವೆಂದು ಶರ್ಮಾ ಸ್ಪಷ್ಟಪಡಿಸಿದ್ದಾರೆ. ಆದರೆ ಟಿವಿ ವಾಹಿನಿಗಳು ಹಾಗೂ ಸುದ್ದಿಪತ್ರಿಕೆಗಳು ಆ ವ್ಯಕ್ತಿಯು ತಾನೆಂದು ತಪ್ಪಾಗಿ ಗುರುತಿಸಿವೆಯೆಂದರು.





