ಸಿರಿಯ: ವಾಯು ದಾಳಿಯಲ್ಲಿ 5 ಆಸ್ಪತ್ರೆ, 2 ಶಾಲೆ ಧ್ವಂಸ; ಕನಿಷ್ಠ 50 ಮಂದಿ ಸಾವು
ವಾಶಿಂಗ್ಟನ್, ಫೆ. 16: ಉತ್ತರ ಸಿರಿಯದ ಮೇಲೆ ನಡೆದ ವಾಯು ದಾಳಿಯಲ್ಲಿ ಕನಿಷ್ಠ ಐದು ಆಸ್ಪತ್ರೆಗಳು ಮತ್ತು ಎರಡು ಶಾಲೆಗಳು ಧ್ವಂಸಗೊಂಡಿವೆ ಹಾಗೂ 50 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಸೋಮವಾರ ಹೇಳಿದೆ.
ಈ ದಾಳಿಗಳು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಅದು ಬಣ್ಣಿಸಿದೆ.
ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿ ನಡೆಸಲಾಗುತ್ತಿರುವ ದಾಳಿಯನ್ನು ಅಮೆರಿಕವೂ ಖಂಡಿಸಿದೆ.
ವಾರದ ಅವಧಿಯಲ್ಲಿ ದಾಳಿಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಮ್ಯೂನಿಕ್‌ನಲ್ಲಿ ಸಭೆ ಸೇರಿರುವ ಶಕ್ತ ರಾಷ್ಟ್ರಗಳು ನಿರ್ಧಾರವನ್ನು ತೆಗೆದುಕೊಂಡ ಕೆಲವೇ ದಿನಗಳಲ್ಲಿ ಸಿರಿಯದಲ್ಲಿ ಹಿಂಸೆ ಉಲ್ಬಣಿಸಿದೆ.
ವಾಯು ದಾಳಿಯನ್ನು ಯಾರು ಮಾಡಿದ್ದಾರೆ ಎಂಬುದನ್ನು ಅಮೆರಿಕವಾಗಲಿ, ವಿಶ್ವಸಂಸ್ಥೆಯಾಗಲಿ ಗುರುತಿಸಿಲ್ಲ. ಆದರೆ, ಸಿರಿಯ ಸರಕಾರ ಅಲೆಪ್ಪೊದ ಸುತ್ತಮುತ್ತ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗೆ ಬೆಂಬಲವಾಗಿ ರಶ್ಯ ವಾಯು ದಾಳಿಗಳನ್ನು ನಡೆಸುತ್ತಿರುವುದನ್ನು ಸ್ಮರಿಸಬಹುದಾಗಿದೆ.
ಆಸ್ಪತ್ರೆಗಳ ಮೇಲೆ ದಾಳಿ ಮಾಡಿಲ್ಲ: ರಶ್ಯ
ಮಾಸ್ಕೊ, ಫೆ. 16: ಉತ್ತರ ಸಿರಿಯದಲ್ಲಿ ಮಾಸ್ಕೊ ಬಾಂಬ್ ದಾಳಿ ನಡೆಸುತ್ತಿಲ್ಲ ಎಂದು ರಶ್ಯದ ವಕ್ತಾರ ಡಿಮಿಟ್ರಿ ಪೆಸ್ಕೊವ್ ಇಂದು ಹೇಳಿದ್ದಾರೆ. ಇಂಥ ವರದಿಗಳು ‘‘ಆಧಾರರಹಿತ ಆರೋಪಗಳು’’ ಎಂದು ಅವರು ಬಣ್ಣಿಸಿದ್ದಾರೆ.‘‘ನಾವು ಮತ್ತೊಮ್ಮೆ ಇಂಥ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸುತ್ತೇವೆ ಹಾಗೂ ಇಂಥ ಹೇಳಿಕೆಗಳನ್ನು ಸ್ವೀಕರಿಸುವುದಿಲ್ಲ’’ ಎಂದರು. ಸಿರಿಯದ ಆಸ್ಪತ್ರೆಗಳ ಮೇಲೆ ರಶ್ಯ ಬಾಂಬ್ ದಾಳಿ ಮಾಡಿದೆಯೇ ಎಂಬ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಧ್ವಂಸಗೊಂಡ ಆಸ್ಪತ್ರೆಗಳಲ್ಲಿ ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’ ಸಂಘಟನೆಗೆ ಸೇರಿದ ಒಂದು ಆಸ್ಪತ್ರೆಯೂ ಇದೆ.





