ಇಂಗ್ಲಿಷ್ ಕೋರ್ಸ್ ಶಿಕ್ಷಕರ ರಕ್ಷಣೆ: ಕಿಮ್ಮನೆ ರತ್ನಾಕರ್
ದೂರ ಶಿಕ್ಷಣದ ಮೂಲಕ ವ್ಯಾಸಂಗ ಮಾಡಲು ಅವಕಾಶ

ಬೆಂಗಳೂರು, ಫೆ.16: ಪದವಿಯಲ್ಲಿ ಇಂಗ್ಲಿಷ್ ವಿಷಯವನ್ನು ಐಚ್ಛಿಕವಾಗಿ ವ್ಯಾಸಂಗ ಮಾಡದೆ ಅಲ್ಪಾವಧಿ ಕೋರ್ಸ್‌ಗಳನ್ನು ಮಾಡಿ, ಪ್ರೌಢಶಾಲೆಗಳಿಗೆ ಶಿಕ್ಷಕರಾಗಿ ಸೇರ್ಪಡೆಯಾದವರು ‘ಇಂಗ್ಲಿಷ್ ಶಿಕ್ಷಕರಲ್ಲ’ ಎಂದು ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅವರ ರಕ್ಷಣೆಗೆ ಸರಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರ ಶಿಕ್ಷಣದ ಮೂಲಕ ಮೂರು ವರ್ಷಗಳಲ್ಲಿ ಇಂಗ್ಲಿಷ್ ವಿಷಯವನ್ನು ವ್ಯಾಸಂಗ ಮಾಡಿ ಉತ್ತೀರ್ಣರಾಗಲು ಶಿಕ್ಷಕರಿಗೆ ಅವಕಾಶ ಕಲ್ಪಿಸಬಹುದಾಗಿದೆ. ಈ ಸಂಬಂಧ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕಾಗುತ್ತದೆ ಎಂದರು.
ಅತಂತ್ರರಾಗಿರುವ ಶಿಕ್ಷಕರನ್ನು ರಕ್ಷಣೆ ಮಾಡುವ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಂದು ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಯ ಚುನಾವಣಾ ನೀತಿ ಸಂಹಿತೆಯು ಫೆ.23ರಂದು ಮುಕ್ತಾಯಗೊಳ್ಳುತ್ತಿದ್ದು, ಆನಂತರ ಸರಕಾರದ ನಿರ್ಧಾರವನ್ನು ಪ್ರಕಟಿಸುವುದಾಗಿ ಅವರು ಹೇಳಿದರು.
932 ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಸಂಬಂಧ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ. ಒಪ್ಪಿಗೆ ಸಿಕ್ಕ ನಂತರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು. ಪಿಯುಸಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯು ಮೀಸಲಾತಿ ಗೊಂದಲದಿಂದ ತಡೆಹಿಡಿಯಲ್ಪಟ್ಟಿದ್ದು, ಫೆ.23ರ ನಂತರ ಅದಕ್ಕೂ ಕಾಯಕಲ್ಪ ಕಲ್ಪಿಸಲಾಗುವುದು ಎಂದು ಕಿಮ್ಮನೆ ರತ್ನಾಕರ್ ತಿಳಿಸಿದರು.
ಭದ್ರಾವತಿ ಕಾಗದ ಕಾರ್ಖಾನೆಯನ್ನು ಉಳಿಸುವ ಸಂಬಂಧ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅಧ್ಯಕ್ಷತೆಯಲ್ಲಿ ಈಗಾಗಲೆ ಒಂದು ಸುತ್ತಿನ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ. ಚುನಾವಣಾ ನೀತಿ ಸಂಹಿತೆ ನಂತರ ಮತ್ತೊಂದು ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು.





