ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆ: ಡಾ.ಜಿ.ಪರಮೇಶ್ವರ್
ಉಪ ಚುನಾವಣೆ ಫಲಿತಾಂಶ;

ಬೆಂಗಳೂರು, ಫೆ.16: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ಗಂಟೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಬ್ಬಾಳ, ದೇವದುರ್ಗ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ಪ್ರತಿನಿಧಿಸುತ್ತಿದ್ದ ದೇವದುರ್ಗ ಕ್ಷೇತ್ರವನ್ನು ನಾವು ಕಳೆದುಕೊಂಡಿದ್ದೇವೆ. ಹೆಬ್ಬಾಳದಲ್ಲಿ ಗೆಲ್ಲುತ್ತೇವೆಂಬ ವಿಶ್ವಾಸವಿತ್ತು. ಆದರೆ, ಗೆಲುವು ಸಾಧಿಸಲಾಗಿಲ್ಲ. ಕಾಂಗ್ರೆಸ್ ಪಕ್ಷದ ಆಂತರಿಕ ವೇದಿಕೆಯಲ್ಲಿ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿದ್ದೇವೆ ಎಂದು ಅವರು ಹೇಳಿದರು. ಈ ಫಲಿತಾಂಶ ಸರಕಾರಕ್ಕೆ ಮಾನದಂಡವಲ್ಲ. ಆದರೂ, ನಮಗೆ ಎಚ್ಚರಿಕೆಯ ಗಂಟೆ ಎಂಬುದನ್ನು ಹೇಳಬಯಸುತ್ತೇನೆ. ಮುಂಬರುವ 2018ರ ವಿಧಾನಸಭಾ ಚುನಾವಣೆಗೆ ಹೆಚ್ಚಿನ ರೀತಿಯಲ್ಲಿ ರಣ ನೀತಿಯನ್ನು ರೂಪಿಸುತ್ತೇವೆ. ಈ ಫಲಿತಾಂಶದ ಬಗ್ಗೆ ವರಿಷ್ಠ ಮಂಡಳಿಗೆ ಚುನಾವಣೆ ವಿವರಗಳನ್ನು ಕಳುಹಿಸಿಕೊಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.
ಕೈ ಗಡಿಯಾರ ಚರ್ಚೆಯಾಗಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಧರಿಸುತ್ತಿದ್ದಾರೆ ಎನ್ನಲಾದ ದುಬಾರಿ ಬೆಲೆಯ ಕೈ ಗಡಿಯಾರಕ್ಕೆ ಸಂಬಂಧಿಸಿದಂತೆ ಪಕ್ಷದ ವೇದಿಕೆಯಲ್ಲಿ ಈವರೆಗೆ ಚರ್ಚೆ ನಡೆದಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಕೈಗಡಿಯಾರದ ವಿಚಾರ ಈಗಾಗಲೇ ಬಹಳ ಎತ್ತರಕ್ಕೆ ಹೋಗಿದೆ. ಕೆಲವು ವಿಚಾರಗಳು ಅವರವರ ವಿವೇಚನೆಗೆ ಬಿಟ್ಟದ್ದು, ಮುಖ್ಯಮಂತ್ರಿ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಅವರು ಉತ್ತರವನ್ನು ನೀಡಿದ್ದಾರೆ. ಆದುದರಿಂದ, ನಾನು ವೈಯಕ್ತಿಕವಾಗಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ.
ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ.







