ಉಪಚುನಾವಣೆ: ಹೆಬ್ಬಾಳ, ದೇವದುರ್ಗದಲ್ಲಿ ಅರಳಿದ ಕಮಲ

ಬೀದರ್ ಕೈ ವಶ, ಜೆಡಿಎಸ್ ಬರಿಗೈ
ಬೆಂಗಳೂರು, ಫೆ.16: ರಾಜಕಾರಣದಲ್ಲಿ ಭಾರೀ ನಿರೀಕ್ಷೆ-ಕುತೂಹಲ ಮೂಡಿಸಿದ್ದ 3 ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಹೆಬ್ಬಾಳ ಹಾಗೂ ದೇವದುರ್ಗ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ್ದು, ಆಡಳಿತಾರೂಢ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ.
ಬೀದರ್ ಕ್ಷೇತ್ರವನ್ನು ಕಾಂಗ್ರೆಸ್ ‘ಕೈ’ವಶ ಮಾಡಿಕೊಂಡಿದ್ದು, ಜೆಡಿಎಸ್ ಮೂರು ಕ್ಷೇತ್ರಗಳಲ್ಲಿಯೂ ಹೀನಾಯ ಸೋಲು ಕಂಡಿದೆ. ಅದು ಠೇವಣಿಯನ್ನೂ ಕಳೆದುಕೊಳ್ಳುವ ಮೂಲಕ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ತೀವ್ರ ಪೈಪೋಟಿ ಸೃಷ್ಟಿಸಿದ್ದ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ 19,149 ಮತಗಳ ಭಾರೀ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಅಬ್ದುರ್ರಹ್ಮಾನ್ ಶರೀಫ್ ವಿರುದ್ಧ ಜಯವನ್ನು ದಾಖಲಿಸಿದ್ದಾರೆ. ಅತ್ತ ದೇವದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್ 16,871 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ನಾಯಕ್‌ರನ್ನು ಸೋಲಿಸಿದ್ದಾರೆ.
ಇನ್ನು ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್ 22,825 ಮತಗಳ ಭಾರೀ ಅಂತರದಿಂದ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಅವರನ್ನು ಸೋಲಿಸಿ ಜಯದ ನಗೆಬೀರಿದ್ದು, ನೂತನವಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೆಬ್ಬಾಳ ಕ್ಷೇತ್ರದ ಜಗದೀಶ್ ಕುಮಾರ್(ಬಿಜೆಪಿ), ದೇವದುರ್ಗದ ವೆಂಕಟೇಶ್ ನಾಯಕ್ (ಕಾಂಗ್ರೆಸ್) ಹಾಗೂ ಬೀದರ್ ಕ್ಷೇತ್ರದ ಗುರುಪಾದಪ್ಪ ನಾಗಮಾರಪಲ್ಲಿ (ಬಿಜೆಪಿ) ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳಿಗೆ ಫೆ.13ರಂದು ಉಪ ಚುನಾವಣೆ ನಡೆದಿತ್ತು.
ಆಡಳಿತಾರೂಢ ಕಾಂಗ್ರೆಸ್, ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ರಾಜಕೀಯ ಪಕ್ಷಗಳ ಮಧ್ಯೆ ಉಪ ಚುನಾವಣೆ ತೀವ್ರ ಪೈಪೋಟಿ ಸೃಷ್ಟಿಸಿತ್ತು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಿದ್ದರು.
ಚುನಾವಣಾ ಪ್ರಚಾರ ಹಾಗೂ ರಾಜಕೀಯ ಪಕ್ಷಗಳ ಲೆಕ್ಕಾಚಾರವನ್ನು ಮೂರು ಕ್ಷೇತ್ರಗಳ ಮತದಾರರು ಸಂಪೂರ್ಣ ತಲೆಕೆಳಗಾಗಿಸಿದ್ದು, ಮೂರು ಕ್ಷೇತ್ರಗಳಲ್ಲಿಯೂ ಅಚ್ಚರಿಯ ಫಲಿತಾಶ ಪ್ರಕಟವಾಗಿದೆ. ಹೆಬ್ಬಾಳ ಹಾಗೂ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿಹಂಚಿಕೊಂಡು ಸಂಭ್ರಮಾಚರಣೆ ಮಾಡಿದರು.
ಅತ್ತ ಬೀದರ್ ಉತ್ತರ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್ ಗೆಲುವಿನ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಬಾವುಟ ಹಿಡಿದು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಪಟ್ಟರು.
ಈ ಮಧ್ಯೆ ಹೆಬ್ಬಾಳ ಹಾಗೂ ದೇವದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನತೆ ನೀಡಿದ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದಿದ್ದಾರೆ. ಆದರೆ, ವಿಪಕ್ಷಗಳ ಮುಖಂಡರು ಬಿಜೆಪಿ ಗೆಲುವು ರಾಜ್ಯ ಸರಕಾರ ಆಡಳಿತ ವೈಫಲ್ಯಗಳಿಗೆ ಹಿಡಿದ ಕನ್ನಡಿ ಎಂದು ವಿಶ್ಲೇಷಿಸಿದ್ದಾರೆ.

♦ ಹೆಬ್ಬಾಳ ಕ್ಷೇತ್ರ:
ವೈ.ಎ.ನಾರಾಯಣಸ್ವಾಮಿ(ಬಿಜೆಪಿ)-60,367
ಅಬ್ದುಲ್ ರೆಹಮಾನ್ ಶರೀಫ್(ಕಾಂಗ್ರೆಸ್)-41,218
ಇಸ್ಮಾಯೀಲ್ ಶರೀಫ್ ನಾನಾ(ಜೆಡಿಎಸ್)-3,666
ಬಿಜೆಪಿ-ಗೆಲುವಿನ (ಅಂತರ)-19,149
***
♦ ದೇವದುರ್ಗ ಕ್ಷೇತ್ರ:
ಶಿವನಗೌಡ ನಾಯಕ್(ಬಿಜೆಪಿ)-72,647
ರಾಜಶೇಖರ್ ನಾಯಕ್(ಕಾಂಗ್ರೆಸ್)-55,776
ಕರೆಮ್ಮ ನಾಯಕ್(ಜೆಡಿಎಸ್)-9,156
ಬಿಜೆಪಿ ಗೆಲುವು (ಅಂತರ)-16,871
***
♦ ಬೀದರ್ ಕ್ಷೇತ್ರ:
ರಹೀಂ ಖಾನ್ (ಕಾಂಗ್ರೆಸ್)-69,250
ಪ್ರಕಾಶ್ ಖಂಡ್ರೆ(ಬಿಜೆಪಿ)-46,425
ಅಯಾಝ್ ಖಾನ್(ಜೆಡಿಎಸ್)-4,307
ಕಾಂಗ್ರೆಸ್ ಗೆಲುವು (ಅಂತರ)-22,825







