ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ: ವಿಶ್ವಾದ್ಯಂತ ವ್ಯಾಪಿಸಿದ ಪ್ರತಿಭಟನೆ

ಉಪನ್ಯಾಸಕರು, ವಿದ್ಯಾರ್ಥಿಗಳ ಜೊತೆ ಕೈಜೋಡಿಸಿದ ಪತ್ರಕರ್ತರು
ಹೊಸದಿಲ್ಲಿ,ಫೆ.16: ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಈಗ ಅಂತಾರಾಷ್ಟ್ರೀಯ ಮಟ್ಟಕ್ಕೆ ವ್ಯಾಪಿಸಿದೆ. ಕೊಲಂಬಿಯ, ಯೇಲ್, ಹಾರ್ವರ್ಡ್, ಕ್ಯಾಂಬ್ರಿಜ್ ಮುಂತಾದ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ 455 ಶಿಕ್ಷಣ ತಜ್ಞರು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು) ದ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಾಗತಿಕ ವಿಶ್ವವಿದ್ಯಾನಿಲಯಗಳ ಶಿಕ್ಷಣ ತಜ್ಞರು ಸಂಯುಕ್ತ ಹೇಳಿಕೆಯೊಂದನ್ನು ಹೊರಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪಟಿಯಾಲ ಹೌಸ್ ನ್ಯಾಯಾಲಯದ ಸಂಕೀರ್ಣದಲ್ಲಿ ಸಂಘಪರಿವಾರದ ಬೆಂಬಲಿಗರಿಂದ ನಡೆದ ಹಲ್ಲೆಯನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಶಿಕ್ಷಕರು ಮಂಗಳವಾರ ಹೊಸದಿಲ್ಲಿಯಲ್ಲಿ ಭಾರೀ ಪ್ರತಿಭಟನೆ ನಡೆಸಿದರು.
ಪಟಿಯಾಲ ಹೌಸ್ ನ್ಯಾಯಾಲಯದ ಆವರಣದಲ್ಲಿ ಸೋಮವಾರ ತಮ್ಮ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಿ ಪತ್ರಕರ್ತರು ಸುಪ್ರೀಂಕೋರ್ಟ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಭಿವ್ಯಕ್ತಿ ಸ್ವಾತಂತ್ರದ ಪರ ಅವರು ಘೋಷಣೆಗಳನ್ನು ಕೂಗಿದರು ಹಾಗೂ ತಮಗೆ ರಕ್ಷಣೆ ನೀಡಲು ದಿಲ್ಲಿ ಪೊಲೀಸರು ವಿಫಲರಾಗಿದ್ದಾರೆಂದು ಆರೋಪಿಸಿದರು.
ಪತ್ರಕರ್ತರ ನಿಯೋಗವೊಂದು ಕೇಂದ್ರ ಸಚಿವ ರಾಜ್‌ನಾಥ್‌ಸಿಂಗ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿತು. ಬಂಧಿತ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಬಿಡುಗಡೆಗೆ ಆಗ್ರಹಿಸಿ ಜೆಎನ್‌ಯು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಇಂದು ಉಪನ್ಯಾಸಕರೂ ಕೈಜೋಡಿಸಿದ್ದು, ತರಗತಿಗಳನ್ನು ಬಹಿಷ್ಕರಿಸಿದ್ದಾರೆ. ‘ಸುಮಾರು 500 ಮಂದಿ ಶಿಕ್ಷಕರು ವಿವಿಯ ಆಡಳಿತ ಕಚೇರಿಯ ಮುಂದೆ ಜಮಾಯಿಸಿ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.

ಕನ್ಹಯ್ಯಕುಮಾರ್‌ನನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಹಾಗೂ ಆತನ ವಿರುದ್ಧದ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದರು. ವಿದೇಶಿ ವಿಶ್ವವಿದ್ಯಾನಿಲಯಗಳ ಶಿಕ್ಷಣತಜ್ಞರಿಂದಲೂ ಜೆಎನ್‌ಯು ವಿದ್ಯಾರ್ಥಿಗಳ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದೆ ‘‘ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಿಶ್ವದಾದ್ಯಂತದ ಶಿಕ್ಷಣತಜ್ಞರು ಜೆಎನ್‌ಯುನಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಆತಂಕದಿಂದ ಗಮನಿಸುತ್ತಿದ್ದಾರೆ. ವಿದ್ಯಾರ್ಥಿಗಳ ಆಕ್ರಮ ಬಂಧನ ಹಾಗೂ ಏಕಪಕ್ಷೀಯ ಅಮಾನತನ್ನು ನಮ್ಮ ಸಹದ್ಯೋಗಿಗಳು ವಿರೋಧಿಸುತ್ತಿರುವಾಗ, ನಾವು ವೌನವಾಗಿರುವುದು ಸಾಧ್ಯವಿಲ್ಲವೆಂದು, 455 ಮಂದಿ ಶಿಕ್ಷಣ ತಜ್ಞರು ಸಹಿಹಾಕಿರುವ ಹೇಳಿಕೆ ತಿಳಿಸಿದೆ.







