ಕಾನೂನು ಬಾಹಿರ ಶಿಕ್ಷಕರ ನೇಮಕ ಪ್ರಕರಣ: ಉನ್ನತ ಶಿಕ್ಷಣ ಇಲಾಖೆ, ರಾಣಿ ಚೆನ್ನಮ್ಮ ವಿವಿ, ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಫೆ.16: ಈ ಹಿಂದೆ ಮಂಗಳೂರು, ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊ.ಬಿ.ಆರ್.ಅನಂತನ್ ಅವರ ಮೇಲೆ ಕಾನೂನು ಬಾಹಿರವಾಗಿ ಶಿಕ್ಷಕರನ್ನು ನೇಮಕ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಸರಕಾರ, ಉನ್ನತ ಶಿಕ್ಷಣ ಇಲಾಖೆಯ ಪಿನ್ಸಿಪಲ್ ಸೆಕ್ರೆಟರಿ, ಡೆಪ್ಯುಟಿ ಸೆಕ್ರೆಟರಿ ಹಾಗೂ ರಾಣಿ ಚೆನ್ನಮ್ಮ ವಿವಿಗೆ ನೋಟಿಸ್ ಜಾರಿ ಮಾಡಿದೆ. ಈ ಸಂಬಂಧ ಬಿ.ಆರ್.ಅನಂತನ್ ಅವರು ಸಲ್ಲಿಸಿದ್ದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ಏಕ ಸದಸ್ಯ ಪೀಠ, ಈ ಆದೇಶ ನೀಡಿದೆ.
ಅರ್ಜಿದಾರರ ಪರ ಮಾತನಾಡಿದ ವಕೀಲರು ಬಿ.ಆರ್.ಅನಂತನ್ ಅವರು ಕುಲಪತಿ ಹುದ್ದೆಯಿಂದ ನಿವೃತ್ತಿಯಾದ ಬಳಿಕ ಅವರ ವಿರುದ್ಧ ಸೆಕ್ಷನ್ 14(7) ಮತ್ತು 14(8)ರ ಅನ್ವಯ ಕಾನೂನು ಬಾಹಿರ ಶಿಕ್ಷಕರ ನೇಮಕದ ತನಿಖೆಗೆ ನ್ಯಾ.ಪಚ್ಚಾಪುರ ಸಮಿತಿಯನ್ನು ರಚಿಸುವಂತಿಲ್ಲ. ಆದರೆ, ಇವರ ಮೇಲಿನ ಆರೋಪಗಳ ತನಿಖೆಗೆ ಪಚ್ಚಾಪುರ ಸಮಿತಿಯನ್ನು ರಚಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಹೇಳಿದರು.
ಬಿ.ಆರ್.ಅನಂತನ್ ಅವರ ಮೇಲಿನ ಆರೋಪಗಳು ಆಧಾರರಹಿತವಾಗಿದ್ದು, ಈ ಸಮಿತಿಯನ್ನು ರದ್ದುಪಡಿಸಲು ಕೋರಿದರು. ನ್ಯಾಯಾಲಯ ವಾದ ಪ್ರತಿವಾದವನ್ನು ಆಲಿಸಿ ಸರಕಾರ, ಉನ್ನತ ಶಿಕ್ಷಣ ಇಲಾಖೆಯ ಪಿನ್ಸಿಪಲ್ ಸೆಕ್ರೆಟರಿ, ಡೆಪ್ಯುಟಿ ಸೆಕ್ರೆಟರಿ ಹಾಗೂ ರಾಣಿ ಚೆನ್ನಮ್ಮ ವಿವಿಗೆ ನೋಟಿಸ್ ಜಾರಿ ಮಾಡಿತು.
ಹಿನ್ನಲೆ: ಬಿ.ಆರ್.ಅನಂತನ್ ಅವರು ಮಂಗಳೂರು ರಾಣಿ ಚೆನ್ನಮ್ಮ ವಿವಿಯ ಕುಲಪತಿಯಾಗಿದ್ದಾಗ ಅರೆ ಕಾಲಿಕ ಶಿಕ್ಷಕರನ್ನು ಕಾನೂನು ಬಾಹಿರವಾಗಿ ನೇಮಕ ಮಾಡಿಕೊಂಡ ಆರೋಪವಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾ.ಪಚ್ಚಾಪುರ ಸಮಿತಿಯನ್ನು ರಚಿಸಿ ತನಿಖೆಯನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನಂತನ್ ಅವರು ಸಮಿತಿಯನ್ನು ರದ್ದುಪಡಿಸಬೇಕೆಂದು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.







