ಪಟಿಯಾಲ ಹೌಸ್ ಹಲ್ಲೆ ಪ್ರಕರಣದ ತ್ವರಿತ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ
ಹೊಸದಿಲ್ಲಿ,ಫೆ.16: ಪಟಿಯಾಲ ಹೌಸ್ ನ್ಯಾಯಾಲಯದ ಆವರಣದಲ್ಲಿ ಪತ್ರಕರ್ತರು ಹಾಗೂ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ತ್ವರಿತ ವಿಚಾರಣೆಯನ್ನು ಮಂಗಳವಾರ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.
ಸೋಮವಾರ ಪಟಿಯಾಲ ಹೌಸ್ ಆವರಣದಲ್ಲಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡಿದ್ದ ಜೆಎನ್‌ಯುವಿನ ಹಳೆ ವಿದ್ಯಾರ್ಥಿ ಎನ್.ಡಿ. ಜೈಪ್ರಕಾಶ್ ಸುಪ್ರೀಂಕೋರ್ಟ್‌ಗೆ ಈ ಅರ್ಜಿಯನ್ನು ಸಲ್ಲಿಸಿದ್ದರು. ಹಲ್ಲೆಯನ್ನು ತಡೆಯುವಲ್ಲಿ ವಿಫಲರಾದ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಅವರು ಅರ್ಜಿಯಲ್ಲಿ ಆಗ್ರಹಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಿರಲು ಪಟಿಯಾಲ ಹೌಸ್ ಕೋರ್ಟ್ ಸಂಕೀರ್ಣದಲ್ಲಿ ಸೂಕ್ತ ಭದ್ರತಾ ಏರ್ಪಾಡುಗಳನ್ನು ಮಾಡುವಂತೆಯೂ ಅವರು ಆಗ್ರಹಿಸಿದ್ದಾರೆ.
ಈ ದಾಳಿಯು ಬಂಧಿತ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರ ಜೀವವನ್ನೂ ಅಪಾಯದಲ್ಲಿ ಸಿಲುಕಿಸಿತ್ತು ಹಾಗೂ ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡುವ ಪತ್ರಕರ್ತರ ಕರ್ತವ್ಯಕ್ಕೂ ಅಡ್ಡಿಪಡಿಸಿತ್ತೆಂದು ಅರ್ಜಿದಾರರು ಆರೋಪಿಸಿದ್ದಾರೆ.





