ಪಾಕ್ ಪರ ಘೋಷಣೆ ಕೂಗಿದ್ದು ಎಬಿವಿಪಿ: ಎಎಪಿ ಆರೋಪ

ದಿಲ್ಲಿ ಪೊಲೀಸರಿಗೆ ವೀಡಿಯೊ ಸಲ್ಲಿಕೆ
ಹೊಸದಿಲ್ಲಿ, ಫೆ.16: ದೇಶದ್ರೋಹದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಜವಾಹರಲಾಲ್ ನೆಹರೂ ವಿದ್ಯಾರ್ಥಿ ಒಕ್ಕೂಟ (ಜೆಎನ್‌ಯುಎಸ್‌ಯು) ಅಧ್ಯಕ್ಷ ಕನ್ಹಯ್ಯಾ ಕುಮಾರ್‌ರ ಬೆಂಬಲಕ್ಕೆ ಧಾವಿಸಿರುವ ಎಎಪಿಯು, ‘ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಕೆಲವು ಎಬಿಪಿವಿ ಕಾರ್ಯಕರ್ತರು, ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರೆಂಬ ತನ್ನ ಆರೋಪವನ್ನು ದೃಢಪಡಿಸುವ ಎರಡು ವೀಡಿಯೊ ಚಿತ್ರಿಕೆಗಳನ್ನು ಮಂಗಳವಾರ ಪೊಲೀಸರಿಗೆ ಸಲ್ಲಿಸಿದೆ.
‘‘ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಕನ್ಹಯ್ಯಾ ಕುಮಾರ್‌ರನ್ನು ಯಾವುದೇ ಸಾಕ್ಷಾಧಾರಗಳಿಲ್ಲದೆ ಬಂಧಿಸಲಾಗಿದೆ. ಈಗ ನಾವು ಸಲ್ಲಿಸಿರುವ ಈ ಎರಡು ವೀಡಿಯೊ ಕ್ಲಿಪ್ಪಿಂಗ್‌ಗಳು, ಘಟನೆಯಲ್ಲಿ ಎಬಿವಿಪಿಯ ಪಾತ್ರದ ಬಗ್ಗೆ ಗಂಭೀರ ಸಂದೇಹವನ್ನು ಮೂಡಿಸುತ್ತದೆ ಹಾಗೂ ಈ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ. ದೇಶ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವ ವ್ಯಕ್ತಿಗಳನ್ನು ತಕ್ಷಣವೇ ಗುರುತಿಸಬೇಕಾಗಿದೆ ಹಾಗೂ ಬಂಧಿಸಬೇಕು’’ ಎಂದು ಎಎಪಿಯು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದೆ.
ಈ ವೀಡಿಯೊ ಕ್ಲಿಪ್ಪಿಂಗ್‌ಗಳ ಪೈಕಿ ಒಂದರಲ್ಲಿ , ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ಎಂದು ಕೆಲವರು ಘೋಷಣೆಗಳನ್ನು ಕೂಗುತ್ತಿದ್ದವರುಎಬಿವಿಪಿಯ ಕಾರ್ಯಕರ್ತರೆಂದು ಎಎಪಿ ಆಪಾದಿಸಿದೆ.





