ಸಕಲ ಸರಕಾರಿ ಗೌರವ; ಹರಿದು ಬಂದ ಜನಸಾಗರ
ಯೋಧ ಪಿ.ಎನ್.ಮಹೇಶ್, ಸುಬೇದಾರ್ ನಾಗೇಶ್ ಅವರ ಅಂತ್ಯಕ್ರಿಯೆ

ಎಚ್.ಡಿಕೋಟೆಯ ವೀರಯೋಧ ಪಿ.ಎನ್.ಮಹೇಶ್ ಅವರ ಅಂತಿಮ ದರ್ಶನ ಪಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಜಿಲ್ಲಾಡಳಿತ.
ಮೈಸೂರು/ಹಾಸನ, ಫೆ.16: ಸಿಯಾಚಿನ್ ಹಿಮಾಪಾತದಲ್ಲಿ ಸಾವನ್ನಪ್ಪಿದ ಎಚ್.ಡಿಕೋಟೆಯ ವೀರಯೋಧ ಪಿ.ಎನ್.ಮಹೇಶ್ ಮತ್ತು ಹಾಸನದ ವೀರಯೋಧ ಸುಬೇದಾರ್ ನಾಗೇಶ್ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಮಂಗಳವಾರ ನೆರವೇರಿತು.
ಯೋಧ ಮಹೇಶ್ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಕೆ.ಆರ್.ನಗರ ತಾಲೂಕಿನ ಪಶುಪತಿ ಗ್ರಾಮದಲ್ಲಿ ನಡೆದರೆ, ಯೋಧ ಸುಬೇದಾರ್ ಅವರ ಅಂತ್ಯಕ್ರಿಯೆ ಹಾಸನ ತಾಲೂಕಿನ ತೇಜೂರು ಗ್ರಾಮದಲ್ಲಿ ನಡೆಯಿತು.
ಸಿಯಾಚಿನ್ನಲ್ಲಿ ಹಿಮಪಾತಕ್ಕೆ ಸಿಲುಕಿ ವೀರ ಮರಣ ಹೊಂದಿದ ಯೋಧರ ಅಂತಿಮ ದರ್ಶನವನ್ನು ಪಡೆಯಲು ವಿವಿಧ ಭಾಗಗಳಿಂದ ಜನ ಸಾಗರವೇ ಹರಿದು ಬಂದಿತ್ತು. ಯೋಧ ಪಿ.ಎನ್.ಮಹೇಶ್ ಪಾರ್ಥಿವ ಶರೀರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯರಾತ್ರಿಯೇ ಬರಮಾಡಿಕೊಂಡು ಗೌರವ ಸಮರ್ಪಿಸಿದರು. ಅನಂತರ ಮಾತನಾಡಿದ ಅವರು, ಯೋಧ ಮಹೇಶ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, 4 ಎಕರೆ ಭೂಮಿ ಮತ್ತು ಕುಟುಂಬದ ಒಬ್ಬರಿಗೆ ಸರಕಾರಿ ನೌಕರಿ ನೀಡುವುದಾಗಿ ಘೋಷಿಸಿದರು. ಸಂಸದರಾದ ಆರ್.ಧ್ರುವನಾರಾಯಣ್, ಪ್ರತಾಪ್ಸಿಂಹ, ಸಚಿವ ವಿ.ಶ್ರೀನಿವಾಸಪ್ರಸಾದ್, ಶಾಸಕರಾದ ತನ್ವೀರ್ ಸೇಠ್, ಎಂ.ಕೆ.ಸೋಮಶೇಖರ್, ವಾಸು ಮೊದಲಾದವರು ಯೋಧ ಮಹೇಶ್ ಅವರ ದರ್ಶನ ಪಡೆದರು. ಯೋಧ ಸುಬೆೇದಾರ್ ನಾಗೇಶ್ ಅವರ ಮೃತದೇಹವನ್ನು ಸೋಮವಾರ ತಡ ರಾತ್ರಿ ಹಾಸನ ನಗರಕ್ಕೆ ತರಲಾಗಿದ್ದು, ಇಂದು ಬೆಳಗ್ಗೆ 7 ಗಂಟೆಯಿಂದ ಸುಮಾರು 10 ಗಂಟೆಯ ವರೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಿದ್ಧಗೊಳಿಸಲಾಗಿದ್ದ ಸ್ಥಳದಲ್ಲಿ ದರ್ಶನಕ್ಕಾಗಿ ಇಡಲಾಯಿತು.
ಈ ವೇಳೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಗೃಹ ಸಚಿವ ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು, ಮಾಜಿ ಸಚಿವ ಎಚ್.ಡಿ. ರೇವಣ್ಣ, ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಜಿಲ್ಲಾಧಿಕಾರಿ ಉಮೇಶ್ ಎಚ್. ಕುಸುಗಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಎಎಸ್ಪಿ ಶೋಭರಾಣಿ ಸೇರಿದಂತೆ ಮತ್ತಿತರ ಗಣ್ಯರು ನಮನ ಸಲ್ಲಿಸಿದರು.
ಮೃತ ಯೋಧರಿಗೆ ಪೊಲೀಸ್ ಮತ್ತು ಮಿಲಿಟರಿ ಸಿಬ್ಬಂದಿಯಿಂದ ವಿಶೇಷ ಗೌರವ ನಮನ ಸಲ್ಲಿಸಲಾಯಿತು. ವೀರ ಯೋಧನ ಅಂತಿಮ ದರ್ಶನ ಪಡೆಯಲು ನಾಗರಿಕರು, ಶಾಲಾ-ಕಾಲೇಜ್ ಮಕ್ಕಳು, ಸ್ಕೌಟ್ ಆ್ಯಂಡ್ ಗೈಡ್ಸ್ ಮಕ್ಕಳು, ಎನ್ಸಿಸಿ ಸಿಬ್ಬಂದಿ, ಸಂಘ-ಸಂಸ್ಥೆಯ ಕಾರ್ಯಕರ್ತರು ಆಗಮಿಸಿದ್ದರು. ಯುವಕರು ಯೋಧರ ಪರವಾಗಿ ಘೋಷಣೆ ಕೂಗಿದರು.
ರಾಜ್ಯ ಸರಕಾರದಿಂದ 25 ಲಕ್ಷ ರೂ. ಪರಿಹಾರ
ಹಾಸನ ತಾಲೂಕಿನ ತೇಜೂರು ಗ್ರಾಮದ ನಿವಾಸಿ ಸುಬೇದಾರ್ ನಾಗೇಶ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಘೋಷಣೆಯಂತೆ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಕುಟುಂಬಕ್ಕೆ 25 ಲಕ್ಷ ರೂ. ಚೆಕ್ ವಿತರಣೆ ಮಾಡಿದರು.





