ಹೆಗ್ಗಣ ಕಡಿತದ ಪ್ರಯಾಣಿಕನಿಗೆ ಪರಿಹಾರ ನೀಡದ ರೈಲ್ವೆ
ಹೊಸದಿಲ್ಲಿ,ಫೆ.16: ಹವಾನಿಯಂತ್ರಿತ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹೆಗ್ಗಣ ಕಡಿತದಿಂದ ಗಾಯಗೊಂಡಿದ್ದ ಕೇರಳದ ನಿವಾಸಿ ಸಿ.ಜೆ.ಬುಶ್‌ಗೆ 13 ಸಾವಿರ ರೂ. ಪರಿಹಾರ ನೀಡುವಂತೆ ಬಳಕೆದಾರರ ವೇದಿಕೆಯು ಕಳೆದ ವರ್ಷ ರೈಲ್ವೆ ಇಲಾಖೆ ಆದೇಶಿಸಿತ್ತು. ಆದರೆ ರೈಲ್ವೆ ಇಲಾಖೆ ಇನ್ನೂ ಕೂಡಾ ಪರಿಹಾರ ಪಾವತಿಸದೆ ಇರುವುದರಿಂದ ಅವರು ಈಗ ಉನ್ನತ ನ್ಯಾಯಾಲಯದ ಮೆಟ್ಟಲೇರಲು ಯೋಚಿಸುತ್ತಿದ್ದಾರೆ. ‘‘ ಆರಂಭದಲ್ಲಿ ನಾನು ರೈಲ್ವೆಯ ವಿರುದ್ಧ ದೂರು ಸಲ್ಲಿಸಲು ಸಿದ್ಧನಿರಲಿಲ್ಲ. ಆದರೆ ಅವರ ನಡವಳಿಕೆ ನಿಜಕ್ಕೂ ನನಗೆ ನೋವುಂಟು ಮಾಡಿದೆ’’ ಎಂದು 54 ವರ್ಷದ ಬುಶ್ ಹೇಳುತ್ತಾರೆ.
2012ರಲ್ಲಿ ಮುಂಬೈ-ಎರ್ನಾಕುಲಂ ತುರಂತ್ ಎಕ್ಸ್‌ಪ್ರೆಸ್‌ನ ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಸಿ.ಎ. ಬುಶ್ ನಿದ್ದೆಯಲ್ಲಿದ್ದಾಗ ಅವರ ಬಲಗೈ ಹೆಬ್ಬೆರಳಿಗೆ ಹೆಗ್ಗಣವೊಂದು ಕಡಿದು ಗಾಯಗೊಳಿಸಿತ್ತು. ತೀವ್ರ ರಕ್ತ ಸೋರುತ್ತಿದ್ದ ಬುಶ್ ಬಗ್ಗೆ ಸಹಪ್ರಯಾಣಿಕರು ರೈಲ್ವೆ ಟಿಕೆಟ್ ತಪಾಸಕರ ಗಮನಕ್ಕೆ ಬಂದಾಗ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಆದರೆ ತಡೆರಹಿತ ರೈಲಾದ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸುವುದಕ್ಕಾಗಿ ಅದನ್ನು ನಿಲ್ಲಿಸಲು ಸಾಧ್ಯವಿಲ್ಲವೆಂದು ಟಿಟಿಇ ತಿಳಿಸಿದರು. ಹೀಗಾಗಿ ಬುಶ್ ಅವರು ಉಪಾಯವಿಲ್ಲದೆ,15 ತಾಸುಗಳಿಗೂ ಹೆಚ್ಚು ಸಮಯ ಪ್ರಯಾಣ ಮುಂದುವರಿಸಬೇಕಾಯಿತು.
ಎರ್ನಾಕುಲಂ ತಲುಪಿದ ಬಳಿಕ ಅವರಿಗೆ ರೈಲ್ವೆ ಆಸ್ಪತ್ರೆಯಲ್ಲಿ ವೈದ್ಯಕೀಯ ನೆರವನ್ನು ನಿರಾಕರಿಸಲಾಗಿತ್ತು. ರೈಲ್ವೆಯ ಹಲವು ಹಿರಿಯ ಉದ್ಯೋಗಿಗಳು ತನಗಾದ ಗಾಯವನ್ನು ಹೆಗ್ಗಣ ಕಡಿತವೆಂದು ಸಾಬೀತುಪಡಿಸುವಂತೆ ತಿಳಿಸಿದರೆಂದು ಬುಶ್ ಆರೋಪಿಸಿದ್ದಾರೆ. ತನ್ನ ಗಾಯಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತನಗೆ ವಿಪರೀತ ಖರ್ಚಾಗಿತ್ತೆಂದು ಅವರು ಹೇಳಿದ್ದಾರೆ.





