ಪೀಟರ್ ಮುಖರ್ಜಿಯಾ ವಿರುದ್ಧ ಚಾರ್ಜ್‌ಶೀಟ್
ಮುಂಬೈ, ಫೆ.16: ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮಾಜಿ ಮಾಧ್ಯಮ ದೊರೆ ಪೀಟರ್ ಮುಖರ್ಜಿಯಾ ವಿರುದ್ಧ ಸಿಬಿಐ ಮಂಗಳವಾರ ಮುಂಬೈನ ನ್ಯಾಯಾಲಯವೊಂದರಲ್ಲಿ ದೋಷಾರೋಪ ಪಟ್ಟಿ ದಾಖಲಿಸಿದೆ. ಕೇಂದ್ರ ತನಿಖಾ ಆಯೋಗ (ಸಿಬಿಐ), ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್.ವಿ. ಅಡೋನೆ ಅವರ ಸಮಕ್ಷಮದಲ್ಲಿ ಪೂರಕ ಚಾರ್ಜ್‌ಶೀಟ್ ಸಲ್ಲಿಸಿತು.
ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಶಾಮೀಲಾದ ಆರೋಪದಲ್ಲಿ ನವೆಂಬರ್ 19ರಂದು ಪೀಟರ್ ಮುಖರ್ಜಿಯಾರನ್ನು ಬಂಧಿಸಲಾಗಿತ್ತು. ಅವರ ಪತ್ನಿ ಇಂದ್ರಾಣಿ ಮುಖರ್ಜಿ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾರೆ. ಜಾಮೀನು ಕೋರಿ ಈ ಹಿಂದೆ ಪೀಟರ್ ಮುಖರ್ಜಿಯಾ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಲಯ ಫೆ.12ರಂದು ತಿರಸ್ಕರಿಸಿತ್ತು. ದೋಷಾರೋಪ ಪಟ್ಟಿ ಇನ್ನೂ ಸಲ್ಲಿಕೆಯಾಗದ ಕಾರಣ ಜಾಮೀನು ನೀಡಲಾಗದೆಂದು ಅದು ತಿಳಿಸಿತ್ತು. ಪ್ರಸ್ತುತ ಪೀಟರ್ ಮುಖರ್ಜಿಯಾ (59) ದಿಲ್ಲಿಯ ಅರ್ಥರ್ ರೋಡ್ ಜೈಲಿನಲ್ಲಿ ಹಾಗೂ ಅವರ ಪತ್ನಿ ಇಂದ್ರಾಣಿಯನ್ನು ಬೈಕುಲಾದ ಮಹಿಳಾ ಜೈಲಿನಲ್ಲಿರಿಸಲಾಗಿದೆ. ಇಂದ್ರಾಣಿಯ ಮಾಜಿ ಪತಿ ಸಂಜೀವ್ ಖನ್ನಾ ಹಾಗೂ ಆಕೆಯ ಮಾಜಿ ಚಾಲಕ ಶ್ಯಾಮವರ್ ರಾಯ್ ಇತರ ಬಂಧಿತ ಆರೋಪಿಗಳು.





