ಪ್ರಾಣಿ-ಪಕ್ಷಿಗಳ ಅಕ್ರಮ ಮಾರಾಟ: ಬಂಧನ
ಬೆಂಗಳೂರು, ಫೆ.16: ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ ಕಾಡಿನಿಂದ ಪ್ರಾಣಿ-ಪಕ್ಷಿಗಳನ್ನು ಅಕ್ರಮವಾಗಿ ಹಿಡಿದು ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿನ ಜಯನಗರ ಠಾಣಾ ಪೊಲೀಸರು ಮೂರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಾದ ವಿನಾಯಕ ನಗರದ ಸೆಯ್ಯದ್ ಲಿಯಾಕತ್(21), ತಮಿಳುನಾಡಿನ ಹೊಸೂರು ಮೂಲದ ಸರ್ದಾರ್ ಸಿಂಗ್(28) ಹಾಗೂ ಮಾಣಿಕ್ಯಂ (45)ಎಂದು ಗುರುತಿಸಲಾಗಿದೆ.
ಆರೋಪಿಗಳು ವನ್ಯಜೀವಿಗಳಾದ ಉಡ ಮತ್ತು ಗಿಳಿ ಪಕ್ಷಿಗಳನ್ನು ಕಾಡಿನಿಂದ ಅಕ್ರಮವಾಗಿ ಹಿಡಿದು ಫೆ.15 ರಂದು ಇಲ್ಲಿನ ಜಯನಗರದ 9ನೆ ಮುಖ್ಯರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಕಾರಿನೊಳಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಅಲ್ಲದೆ, ಇಂದು ಬೆಳಗ್ಗೆ 6 ಗಂಟೆಗೆ ಆರೋಪಿ ಲಿಯಾಕತ್ ಎರಡು ಜೀವಂತ ಉಡ ಪಕ್ಷಿಗಳನ್ನು ಮಾರಾಟ ಮಾಡಲು ಬಂದಿದ್ದು, ಈ ವೇಳೆ ಆತನನ್ನು ಬಂಧಿಸಿ ವಿಚಾರಣೆ ಕೈಗೊಂಡ ಬಳಿಕ ಸರ್ದಾರ್ ಸಿಂಗ್, ಮಾಣಿಕ್ಯಂ ಇಬ್ಬರು ಈ ಅಕ್ರಮ ಮಾರಾಟದ ಜಾಲದಲ್ಲಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಅವರ ವಶದಲ್ಲಿದ್ದ ನಾಲ್ಕು ಉಡ ಮತ್ತು 10 ಗಿಳಿ ಪಕ್ಷಿಗಳನ್ನು ವಶಕ್ಕೆ ತೆಗೆದುಕೊಂಡು ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಅನ್ವಯ ಪ್ರಕರಣ ದಾಖಲು ಮಾಡಿ ಹೆಚ್ಚುವರಿ ತನಿಖೆ ಕೈಗೊಂಡಿದ್ದಾರೆ.





