ನ್ಯಾಯಾಲಯದ ಆವರಣದಲ್ಲಿ ಜೆಎನ್ ವಿವಿ ವಿದ್ಯಾರ್ಥಿ ಸಂಘದ ನಾಯಕ ಕನ್ಹೇಯಾ ಮೇಲೆ ಹಲ್ಲೆ
ಸುಪ್ರೀಮ್ ಕೋರ್ಟ್ ಆದೇಶವನ್ನು ಪಾಲಿಸಲು ಪೊಲೀಸರು ವಿಫಲ

ಹೊಸದಿಲ್ಲಿ, ಫೆ.17: ಜವಾಹರ‍್ಲಾಲ್ ನೆಹರೂ ವಿವಿ ವಿದ್ಯಾರ್ಥಿ ಸಂಘದ ನಾಯಕ ಕನ್ಹೈಯಾ ಕುಮಾರ‍್ ಮೇಲೆ ಪಟಯಾಲದ ನ್ಯಾಯಾಲಯದ ಆವರಣದಲ್ಲಿ ಗುಂಪೊಂದು ಹಲ್ಲೆಗೈದ ಘಟನೆ ಇಂದು ನಡೆದಿದೆ.
ನ್ಯಾಯಾಲಯಕ್ಕೆ ಕನ್ಹೈಯಾ ಕುಮಾರ‍್ ಅವರನ್ನು ಬಿಗು ಭದ್ರತೆಯಲ್ಲಿ ವಿಚಾರಣೆಗೆ ಹಾಜರುಪಡಿಸಲು ತರುತ್ತಿದ್ದಾಗ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವುದಾಗಿ ಹೇಳಲಾಗಿದೆ.
ಸುಮಾರು ೪೦೦ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದ್ದರೂ, ಪೊಲೀಸರ ರಕ್ಷಣಾಕೋಟೆಯನ್ನು ಭೇದಿಸಿ ಒಳನುಗ್ಗಿದ ವಕೀಲರ ಗುಂಪು ಕನ್ಹೈಯಾ ಕುಮಾರ‍್ ಅವರೊಂದಿಗೆ ಅನುಚಿತವಾಗಿ ವರ್ತಿಸಿ, " ಭಾರತ್ ಮಾತಾ ಕೀ ಜೈ " ಎಂದು ಘೋಷಣೆ ಕೂಗಿದರೆನ್ನಲಾಗಿದೆ. ಇದೇ ವೇಳೆ ಘಟನೆಯ ಬಗ್ಗೆ ವರದಿ ಮಾಡಲು ಬಂದಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆ ನಡೆದ ಘಟನೆ ವರದಿಯಾಗಿದೆ.
ವಿಕ್ರಮ್ ಚೌಹಾನ್ ನೇತೃತ್ವದ ವಕೀಲರ ತಂಡ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ವಿಕ್ರಮ್ ಚೌಹಾನ್ ಸೋಮವಾರ ಜೆಎನ್ ವಿವಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಎಂದು ಹೇಳಲಾಗಿದೆ.
ವಿದ್ಯಾರ್ಥಿ ಸಂಘದ ನಾಯಕ ಕನ್ಹೈಯಾ ಕುಮಾರ‍್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಯಾರಿಗೆಲ್ಲ ಅವಕಾಶ ನೀಡಬೇಕೆಂದು ಸುಪ್ರೀಮ್ ಕೋರ್ಟ್ ಸ್ಪಷ್ಟವಾಗಿ ನಿರ್ದೇಶನ ನೀಡಿದ್ದರೂ, ವಕೀಲರ ತಂಡವೊಂದು ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ, ತ್ರಿವರ್ಣ ಧ್ವಜದೊಂದಿಗೆ ದೇಶದ ಪರ ಘೋಷಣೆ ಕೂಗುತ್ತಾ ಆಗಮಿಸಿ, ಪರ್ತಕರ್ತರ ಮೇಲೆ ನಡೆಸಿತೆಂದು ತಿಳಿದು ಬಂದಿದೆ.
ನ್ಯಾಯಮೂರ್ತಿ ಜೆ.ಚೆಲ್ಮೇಶ್ವರ ಮತ್ತು ನ್ಯಾಯಮೂರ್ತಿ ಸಪ್ರೆ ಅವರನ್ನೊಳಗೊಂಡ ಪೀಠ ಆರೋಪಿ ಕನ್ಹೈಯಾ ಕುಮಾರ‍್ ವಿಚಾರಣೆಯ ವೇಳೆ ಅವರ ಕುಟುಂಬದ ಇಬ್ಬರು ಸದಸ್ಯರು, ಓರ್ವ ಶಿಕ್ಷಕ, ಓರ್ವ ವಿದ್ಯಾರ್ಥಿ ಪ್ರತಿನಿಧಿ ಹಾಗೂ ಐವರು ಪತ್ರಕರ್ತರಿಗೆ ಮಾತ್ರ ಅವಕಾಶ ಆದೇಶ ನೀಡಿತ್ತು.





