ಎರಡು ತಿಂಗಳೊಳಗೆ ಚಾಂಡಿ ಸರಕಾರಕ್ಕೆ ಪಾಠ ಕಲಿಸುತ್ತೇವೆ: ಕೇರಳ ವ್ಯಾಪಾರಿ ಸಂಘಟನೆಯ ಅಧ್ಯಕ್ಷ ನಸೀರುದ್ದೀನ್

ತಿರುವನಂತಪುರಂ: ಬಾರ್ ನಿಷೇಧ ಹಾಗೂ ಲಂಚ ಹಗರಣ ಇತ್ಯಾದಿಗಳಿಂದ ಕೇರಳದ ಯುಡಿಎಫ್ ಸರಕಾರದ ವಿರುದ್ಧ ಉದ್ಯಮಿಗಳ ಹೋರಾಟ ಒಂದೆಡೆ ನಡೆಯುತ್ತಿದ್ದರೆ, ಅವರ ಹಿಂದೆಯೇ ವ್ಯಾಪಾರಿಗಳು ಉಮ್ಮನ್ ಚಾಂಡಿ ಸರಕಾರದ ವಿರುದ್ಧ ಯುದ್ಧ ಘೋಷಿಸಿದ್ದಾರೆ.
ನಿನ್ನೆ ಅಂಗಡಿ ಮುಚ್ಚಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಕಲ ಕ್ಷೇತ್ರಗಳಲ್ಲಿ ವ್ಯಾಪಾರಿಗಳನ್ನು ವಂಚಿಸುವ ನಿಲುವನ್ನು ಯುಡಿಎಫ್ ಸರಕಾರ ತಳೆದಿದೆ. ಎರಡು ತಿಂಗಳೊಳಗೆ ಸರಕಾರಕ್ಕೆ ಪಾಠ ಕಲಿಸಿ ಮುಂದೆ ಯಾರು ಆಳ್ವಿಕೆ ನಡೆಸಬೇಕೆಂಬುದನ್ನು ವ್ಯಾಪಾರಿಗಳು ತೀರ್ಮಾನಿಸಲಿದ್ದಾರೆ ಎಂದು ವ್ಯಾಪಾರ-ವಾಣಿಜ್ಯ ಏಕೋಪನ ಸಮಿತಿಯ ರಾಜ್ಯಾಧ್ಯಕ್ಷ ಟಿ.ನಸೀರುದ್ದೀನ್ ಹೇಳಿದ್ದಾರೆ.
ಹತ್ತುಸಾವಿರಕ್ಕೂ ಅಧಿಕ ಜನರು ಸೇರಿದ್ದ ಹೋರಾಟ ಘೋಷಣೆ ಸಮ್ಮೇಳನವನ್ನು ಉದ್ಘಾಟಿಸಿ ಮಾತಾಡಿದ ಅವರು ವ್ಯಾಪಾರಿಗಳು ಪ್ರಾಮಾಣಿಕವಾಗಿ ನೆರವಾದ್ದರಿಂದ ಯುಡಿಎಫ್ ಸರಕಾರ ಅಧಿಕಾರಕ್ಕೆ ಬಂತು. ಆದರೆ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಾರಿಗಳನ್ನು ವಂಚಿಸಲಾಗಿದೆ ಎಂದು ಉಮ್ಮನ್ ಚಾಂಡಿ ಸರಕಾರವನ್ನು ಕುಟುಕಿದ್ದಾರೆ. ವ್ಯಪಾರಿಗಳೊಂದಿಗೆ ಮಾಡಿಕೊಂಡ ಒಪ್ಪಂಡವನ್ನು ಸರಕಾರ ಉಲ್ಲಂಘಿಸಿದೆ.
ಏಕೋಪನ ಸಮಿತಿ ಇನ್ನು ತಿರುಗುವುದು ಎಡಭಾಗಕ್ಕೋ ಬಲಭಾಗಕ್ಕೋ ಎಂಬುದನ್ನು ನಿರ್ಧರಿಸುವ ಸಭೆಯಿದು. ಮುಂದಿನ ಚುನಾವಣೆಯೊಂದಿಗೆ ವ್ಯಪಾರಿಗಳ ಧ್ವನಿ ವಿಧಾನ ಸಭೆಯಲ್ಲಿ ಮೊಳಗಲಿದೆ ಎಂದು ನಸೀರುದ್ದೀನ್ ಹೇಳಿದರು.
ರಾಜ್ಯ ಕಾರ್ಯದರ್ಶಿ ಜೋಬ್ ವಿ. ಚುಂಗತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅದೇ ವೇಳೆ ಏಕೋಪನ ಸಮಿತಿ ಹಸನ್ ಕೋಯ ವಿಭಾಗ ನಿನ್ನೆ ಸೆಕ್ರೆಟರಿಯೇಟ್ ಬಳಿ ಧರಣಿ ನಡೆಸಿದೆ. ರಾಜ್ಯಾಧ್ಯಕ್ಷ ಕೆ. ಹಸನ್ ಮಾತನಾಡಿದರು.
ಕೇರಳದ 600 ವ್ಯಾಪಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಮೋದಿ ಸರಕಾರ ವ್ಯಾಪಾರಿಗಳಿಗೆ ಅನುಕೂಲ ನಿಲುವು ತಳೆಯುತ್ತಿದೆ ಎಂದು ನಸೀರುದ್ದೀನ್ ಹೇಳುತ್ತಾರೆ. ಇದರಿಂದಾಗಿ ಸಂಘಟನೆಯಲ್ಲಿ ಭಿನ್ನ ಮತ ಉಂಟಾಯಿತು.







