ಕೊಲ್ಯ : ಟ್ರಾವೆಲ್ಲರ್ ಢಿಕ್ಕಿ ಪಾದಾಚಾರಿ ವೃದ್ಧೆ ಸ್ಥಳದಲ್ಲೇ ಸಾವು

ಉಳ್ಳಾಲ. ಫೆ, 17: ರಾಷ್ಟ್ರೀಯ ಹೆದ್ದಾರಿ 66ರ ಸೋಮೇಶ್ವರ ಕೊಲ್ಯದಲ್ಲಿ ವೇಗವಾಗಿ ಬರುತ್ತಿದ್ದ ಟ್ರಾವೆಲ್ಲರ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಪಾದಾಚಾರಿ ವೃದ್ಧೆಯೋರ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕೊಲ್ಯ ಸಾರಸ್ವತ ಕೊಲನಿಯ ನಾಗಮ್ಮ(65)ಮೃತ ದುರ್ದೈವಿಯಾಗಿದ್ದಾರೆ.ಬುಧವಾರ ಸಾಯಂಕಾಲ ನಾಗಮ್ಮಳ ಹಿರಿಯ ಮಗಳು ನಳಿನಿಯವರು ಕಾಸರಗೋಡಿನ ಗಂಡನ ಮನೆಗೆ ಹೊರಟಿದ್ದು ಮಗಳನ್ನು ಮನೆಯಿಂದ ಕೊಲ್ಯ ಬಸ್ಸು ತಂಗುದಾಣದವರೆಗೆ ಬೀಳ್ಕೊಡಲು ತಾಯಿಯೂ ಜೊತೆಯಲ್ಲಿ ಬಂದಿದ್ದು , ಬಸ್ಸು ನಿಲ್ದಾಣದತ್ತ ತಲುಪಲು ನಾಗಮ್ಮರು ಮೊದಲು ಹೆದ್ದಾರಿಯನ್ನು ದಾಟುತ್ತಿದ್ದ ವೇಳೆ ತಲಪಾಡಿಯಿಂದ ಮಂಗಳೂರಿಗೆ ವೇಗವಾಗಿ ಧಾವಿಸುತ್ತಿದ್ದ ಕೇರಳ ನೋಂದಣಿಯ ಟ್ರಾವೆಲ್ಲರ್ ಒಂದು ಢಿಕ್ಕಿ ಹೊಡೆದ ಪರಿಣಾಮ ನಾಗಮ್ಮರ ತಲೆ ಮತ್ತು ದೇಹ ಛಿಧ್ರವಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ.ಘಟನೆಯನ್ನು ತಾಯಿಯ ಹಿಂದೆಯೇ ರಸ್ತೆ ದಾಟುತ್ತಿದ್ದ ಮಗಳು ನಳಿನಿ ಅವರು ಕಣ್ಣಾರೆ ಕಂಡಿದ್ದು ಮಾನಸಿಕವಾಗಿ ಜರ್ಜರಿತರಾಗಿದ್ದಾರೆ.
ನಾಗಮ್ಮ ಉಳ್ಳಾಲದ ಬೀಚ್ ರೆಸಾರ್ಟ್‌ವೊಂದರಲ್ಲಿ ದಿನಗೂಲಿ ಕೆಲಸಕ್ಕಿದ್ದು ಕಡುಬಡ ಕುಟುಂಬದವರಾಗಿದ್ದಾರೆ. ಕಳೆದ ಕೆಲ ವರುಷಗಳ ಹಿಂದೆ ಗಂಡನನ್ನು ಕಳಕೊಂಡು ನಾಲ್ಕು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ.ನಾಲ್ವರಲ್ಲಿ ಮೂವರು ಹೆಣ್ಣು ಮಕ್ಕಳಾಗಿದ್ದು,ಇಬ್ಬರು ವಿವಾಹವಾಗಿದ್ದರೆ ಎರಡನೇ ಮಗಳು ಮೂಖಿಯಾಗಿದ್ದು ಅವಿವಾಹಿತಳಾಗಿದ್ದಾಳೆ .ಮಗ ರವಿಂದ್ರ ಪೈಂಟರ್ ವೃತ್ತಿ ಮತ್ತು ತೆಂಗಿನ ಕಾಯಿ ಕೀಳುವ ಕಾಯಕ ನಡೆಸಿ ಮನೆಯನ್ನು ಮುನ್ನಡೆಸುತ್ತಿದ್ದಾರೆ.ಉಳ್ಳಾಲ ಪೋಲೀಸ್ ಠಾಣಾ ಪೋಲೀಸರು ಟ್ರಾವೆಲ್ಲರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ








