ಮಾಯಾವತಿ ಸರಕಾರದ 5 ಭ್ರಷ್ಟ ಸಚಿವರ ವಿರುದ್ಧ ಕೇಸು: ರಾಜ್ಯಪಾಲರ ಅನುಮತಿಯ ನಿರೀಕ್ಷೆಯಲ್ಲಿ

ಲಕ್ನೋ: ಬಿಎಸ್ಪಿ ಸರಕಾರದ ಮಾಜಿ ಉನ್ನತ ಶಿಕ್ಷಣ ಸಚಿವ ರಾಕೇಶ್ ಧರ್ ತ್ರಿಪಾಠಿ ಮೇಲೆ ವಿಜಿಲೆನ್ಸ್ ಉರುಳು ಬಿದ್ದಿದೆ. ರಾಜ್ಯಪಾಲ ರಾಮ್‌ನಾಯ್ಕ್ ಅವರ ವಿರುದ್ಧ ಭ್ರಷ್ಟಾಚಾರವಿರೋಧಿ ಕಾನೂನು ಪ್ರಕಾರ ಕೇಸು ದಾಖಲಿಸಲು ಅನುಮತಿ ನೀಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಆರೋಪ ಪಟ್ಟಿ ದಾಖಲಿಸಿ ಬಂಧಿಸಬಹುದಾಗಿದೆ.
ತ್ರಿಪಾಠಿ ವಿರುದ್ಧ ಆದಾಯಕ್ಕಿಂತ ಶೆ. 295ರಷ್ಟು ಅಧಿಕ ಸಂಪತ್ತುಗಳಿಕೆ ಆರೋಪ ಇದ್ದು ಸಾಕ್ಷ್ಯಗಳು ಲಭ್ಯವಾಗಿದೆ. ವಿಜಿಲೆನ್ಸ್ ಮುಂದೆ ಅಷ್ಟು ಸಂಪತ್ತನ್ನು ಹೇಗೆ ಸಂಪಾದಿಸಿದರು ಎಂಬುದಕ್ಕೆ ಉತ್ತರವನ್ನು ನೀಡಲು ಅವರು ವಿಫಲರಾಗಿದ್ದರು.
ಎಸ್ಪಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಭ್ರಷ್ಟಾಚಾರ ಆರೋಪಿಗಳಾದ ಬಿಎಸ್ಪಿ ಸರಕಾರದ ಮಾಜಿ ಸಚಿವರ ವಿರುದ್ಧ ಕ್ರಮಕೈಗೊಳ್ಳಲು ವಿಜಿಲೆನ್ಸ್‌ಗೆ ಸೂಚಿಸಿತ್ತು. 2013ರಲ್ಲಿ ವಿಜಿಲೆನ್ಸ್ ತನಿಖೆ ನಡೆಸಿದ್ದು ಬಿಎಸ್ಪಿ ಸರಕಾರದ ಮೂವರು ಮಾಜಿ ಸಚಿವರರಾದ ರಂಗನಾಥ್ ಮಿಶ್ರ, ಅವಧ್‌ಪಾಲ್ ಸಿಂಗ್ ಯಾದವ್ ಹಾಗೂ ಬಾದ್‌ಶಾಹ ಸಿಂಗ್ ವಿರುದ್ಧ ಆರೋಪ ಸಾಬೀತು ಗೊಂಡಿತ್ತು. ಈ ಹಿನ್ನೆಲೆಯಲ್ಲಿ ವಿಜಿಲೆನ್ಸ್ ಆರೋಪ ಪಟ್ಟಿ ದಾಖಲಿಸಲು ರಾಜ್ಯಪಾಲರಿಂದ ಅನುಮತಿಯನ್ನು ಯಾಚಿಸಿತ್ತು.
ತ್ರಿಪಾಠಿ ವಿರುದ್ಧ ವಿಜಿಲೆನ್ಸ್ ಪ್ರಬಲ ಪುರಾವೆಗಳನ್ನು ಸಂಗ್ರಹಿಸಿದೆಎನ್ನಲಾಗಿದೆ. ಲೇಖನ ಸಾಮಗ್ರಿಗಳ ಹಗರಣಗಳಲ್ಲಿ ಅವರನ್ನು ಪ್ರಶ್ನಿಸಲಾಗಿತ್ತು. 2007ರಿಂದಅಕ್ಟೋಬರ್ 2011ರ ನಡುವೆ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಭಾರಿ ಸಂಪತ್ತನ್ನು ತ್ರಿಪಾಠಿ ಕಲೆಹಾಕಿದ್ದರು ಎಂದು ವಿಜಿಲೆನ್ಸ್ ಕಂಡುಕೊಂಡಿದೆ.
ಅವರ ಒಟ್ಟು ಸಂಪತ್ತು 45,82,215 ರೂಪಾಯಿಯದ್ದಾಗಿದ್ದರೆ ಅವರು ಹೆಚ್ಚುವರಿ ಗಳಿಸಿದ ಸಂಪತ್ತು 1,81,20,566 ರೂ. ಆಗಿದ್ದು ಇದು ಅವರ ಕಾನೂನುಬದ್ಧ ಸಂಪತ್ತಿಗಿಂತ ಶೇ. 295ರಷ್ಟು ಅಧಿಕವಾಗಿದೆ. ಭ್ರಷ್ಟಾಚಾರ ಆರೋಪಿಗಳಾದ ಬಿಎಸ್ಪಿಯ ಐವರು ಮಾಜಿ ಸಚಿವರ ವಿರುದ್ಧ ತನಿಖೆಗೆ ವಿಜಿಲೆನ್ಸ್ ಅನುಮತಿ ಯಾಚಿಸಿತ್ತು.
ಇವರಲ್ಲಿ ರಾಕೇಶ್ ಧರ್ ತ್ರಿಪಾಠಿ ಮತ್ತು ಮಾಜಿ ಸಚಿವರಾದ ಚಂದ್ರದೇವ್ ರಾಮ್ ಯಾದವ್, ನಸೀಮುದ್ದೀನ್ ಸಿದ್ದೀಕಿ, ರಾಮ್‌ವೀರ್ ಉಪಾಧ್ಯಾಯ ಮತ್ತು ಬಾಬು ಸಿಂಗ್ ಕುಶ್ವಾಹ್‌ರ ಹೆಸರು ಕೂಡ ಇದೆ
ಈಗ ರಾಜ್ಯಪಾಲರಿಂದ ಕೇವಲ ತ್ರಿಪಾಠಿ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಸಿಕ್ಕಿದ್ದು ವಿಜಿಲೆನ್ಸ್ ಉಳಿದವರ ಅನುಮತಿ ಸಿಗುವುದನ್ನು ಕಾಯುತ್ತಿದೆ.







