ಸಿಯಾಚಿನ್ ಹುತಾತ್ಮನ ಅಂತ್ಯಕ್ರಿಯೆ: ಶವಪೆಟ್ಟಿಗೆಯಲ್ಲಿ ಜಯಾ ಫೋಟೊ ಪ್ರದರ್ಶಿಸಿದ ಸಚಿವ

ಚೆನ್ನೈ: ತಮಿಳುನಾಡಿನ ರಾಜಕೀಯ ಪ್ರಚಾರದ ಗೀಳು ಸಿಯಾಚಿನ್ ಯೋಧನ ಅಂತ್ಯಸ್ಕಾರವನ್ನೂ ಬಿಟ್ಟಿಲ್ಲ. ಯೋಧನ ಅಂತ್ಯಕ್ರಿಯೆ ಸಂದರ್ಭ ಶವಪೆಟ್ಟಿಗೆಯ ಮುಂದೆ, ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಭಾವಚಿತ್ರವನ್ನು ಪ್ರದರ್ಶಿಸುವುದನ್ನು ಸಚಿವ ಮರೆಯಲಿಲ್ಲ!
ಸಿಯಾಚಿನ್‌ನಲ್ಲಿ ಭೀಕರ ಹಿಮಪಾತಕ್ಕೆ ಬಲಿಯಾದ ಯೋಧ ಜಿ.ಗಣೇಶನ್ ಅವರ ಅಂತ್ಯಕ್ರಿಯೆ ಮಧುರೈನಲ್ಲಿ ಮಂಗಳವಾರ ಬೆಳಿಗ್ಗೆ ನಡೆಯಿತು.
ಸಾರ್ವಜನಿಕರು ಯೋಧನಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದ ಸಂದರ್ಭದಲ್ಲಿ ರಾಜ್ಯದ ಸಚಿವ ಸೆಲ್ಲೂರು ರಾಜು ಕೂಡಾ ಜಿಲ್ಲಾಧಿಕಾರಿ ರಾಘವ ರಾವ್ ಜತೆ ಅಲ್ಲಿಗೆ ಬಂದರು.
ರಾಜ್ಯ ಸರ್ಕಾರದ ಪರವಾಗಿ 10 ಲಕ್ಷ ರೂಪಾಯಿ ಪರಿಹಾರ ಹಸ್ತಾಂತರಿಸಲು ಬಂದಿದ್ದ ಸಚಿವ, ಇದರ ಗೌರವ ಯಾರಿಗೆ ಸಲ್ಲಬೇಕು ಎಂಬ ಬಗ್ಗೆ ಯಾವುದೇ ಸಂಶಯ ಇರಬಾರದು ಎಂದು ಯೋಚಿಸಿದರು. ತಕ್ಷಣ ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರವನ್ನು ಶವಪೆಟ್ಟಿಗೆ ಮುಂದೆ ಪ್ರದರ್ಶಿಸಿದರು. ಮಗನ ಸಾವಿನ ದುಃಖ ತಡೆಯಲಾಗದೇ ಅಳುತ್ತಿದ್ದ ತಾಯಿಯತ್ತ ಸನ್ನೆ ಮಾಡಿ, ಯಾರು ಹಣ ಮಂಜೂರು ಮಾಡಿದ್ದಾರೆ ಎಂದು ನೋಡುವಂತೆ ಸೂಚಿಸಿದರು. ಆ ದುಃಖದ ಮಡುವಿನಲ್ಲಿದ್ದರೂ ತಾಯಿ ಕೃತಜ್ಞತೆಯಿಂದ ಕೈಮುಗಿದರು.
ಇದು ಸೇರಿದ್ದ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಯಿತು. ಇದು ಹುತಾತ್ಮನ ಶವಪೆಟ್ಟಿಗೆ ಮುಂದೆ ಅವಿವೇಕದ ಹಾಗೂ ನಾಚಿಕೆಗೇಡಿನ ಕ್ರಮ ಎಂದು ಸ್ಥಳೀಯ ನಿವಾಸಿ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಹಾಗೂ ಜಿಲ್ಲಾಧಿಕಾರಿ ಪ್ರತಿಕ್ರಿಯೆಗೆ ಲಭ್ಯರಿರಲಿಲ್ಲ.
ಈ ವರ್ಷಾಂತ್ಯದಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಎಐಎಡಿಎಂಕೆ ಕಾರ್ಯಕರ್ತರು ಸಾಧ್ಯವಿರುವ ಕಡೆಗಳಲ್ಲೆಲ್ಲ ಜಯಲಲಿತಾ ಅವರನ್ನು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇತ್ತೀಚಿನ ಪ್ರವಾಹ ಪರಿಹಾರ ಕಾರ್ಯಾಚರಣೆ ವೇಳೆ ಕೂಡಾ ಜನರು ಹಾಗೂ ಸ್ವಯಂಸೇವಾ ಸಂಸ್ಥೆಗಳು ನೀಡಿದ್ದ ಪರಿಹಾರ ಸಾಮಗ್ರಿಗಳ ಮೇಲೆ ಜಯಲಲಿತಾ ಅವರ ಭಾವಚಿತ್ರದ ಸ್ಟಿಕ್ಕರ್ ಅಂಟಿಸಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಕಳೆದ ವಾರ ಪಕ್ಷ ಜಯಲಲಿತಾ ಅವರ 68ನೇ ಹುಟ್ಟುಹಬ್ಬದ ಅಂಗವಾಗಿ ಸಾಮೂಹಿಕ ವಿವಾಹವನ್ನು ಆಯೋಜಿಸಿತ್ತು. ನೂತನ ವಧೂವರರಿಗೆ ಜಯಲಲಿತಾ ಭಾವಚಿತ್ರವಿದ್ದ ಬಾಸಿಂಗಗಳನ್ನು ಕಟ್ಟಲಾಗಿತ್ತು!







