ಹೊವಿಟ್ಜರ್ ಜೋಡಣೆ, ಪರೀಕ್ಷೆ: ಮಹೀಂದ್ರ ಜತೆ ಬಿಎಇ ಒಪ್ಪಂದ

ನವದೆಹಲಿ: ಸುಮಾರು 25 ಕಿಲೋಮೀಟರ್ ದೂರದ ವರೆಗೂ ಗುರಿ ಇಡಬಹುದಾದ ಲಘುತೂಕದ ಫಿರಂಗಿ ತೋಪುಗಳ ಜೋಡಣೆ ಮತ್ತು ಪರೀಕ್ಷೆಗೆ ಮಹೀಂದ್ರ ಕಂಪನಿಯನ್ನು ಭಾರತದಲ್ಲಿ ಪಾಲುದಾರ ಸಂಸ್ಥೆಯಾಗಿ ಆಯ್ಕೆ ಮಾಡಿರುವುದಾಗಿ, 145 ಎಂ-777 ಹೊವಿಟ್ಜರ್‌ಗಳನ್ನು ಸರಬರಾಜು ಮಾಡಲು 700 ದಶಲಕ್ಷ ಡಾಲರ್ ಗುತ್ತಿಗೆ ಪಡೆದಿರುವ ಬಿಎಇ ಸಿಸ್ಟಮ್ಸ್ ಪ್ರಕಟಿಸಿದೆ.
"ವಿದೇಶಿ ಸೇನಾ ಮಾರಾಟ ವ್ಯವಸ್ಥೆ ಮೂಲಕ ಬಂದೂಕುಗಳನ್ನು ಖರೀದಿಸಲಾಗಿದ್ದರೂ, ಅದರ ಬಿಡಿಭಾಗಗಳು, ನಿರ್ವಹಣೆ ಹಾಗೂ ಮದ್ದುಗುಂಡುಗಳನ್ನು ಭಾರತೀಯ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತದೆ" ಎಂದು ರಕ್ಷಣಾ ಮೂಲಗಳು ಹೇಳಿವೆ.
145 ಇಂಥ ಫಿರಂಗಿಗಳ (ಎಂ777ಎ2ಎಲ್‌ಡಬ್ಲ್ಯು155)ನ್ನು ಭಾರತಕ್ಕೆ ಸರಬರಾಜು ಮಾಡುವ ಬಗ್ಗೆ ಭಾರತ ಹಾಗು ಅಮೆರಿಕ ಚರ್ಚೆ ನಡೆಸುತ್ತಿವೆ. ಇವುಗಳ ಜೋಡಣೆ, ಸಮಗ್ರಗೊಳಿಸುವಿಕೆ ಹಾಗೂ ಪರೀಕ್ಷೆ ನಡೆಸಲು ಮಹೇಂದ್ರ ಜೊತೆ ಮುಂದಿನ ವಾರಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಕಂಪನಿ ಪ್ರಕಟಿಸಿದೆ.
ಈ ಶಸ್ತ್ರವ್ಯವಸ್ಥೆಯನ್ನು ಹೆಚ್ಚು ಸ್ವದೇಶೀಕರಿಸುವ ಪ್ರಸ್ತಾವವನ್ನು ಬಿಎಇ ಕಳೆದ ವರ್ಷ ಅಮೆರಿಕ ಸರ್ಕಾರಕ್ಕೆ ಸಲ್ಲಿಸಿತ್ತು. ಇದರ ಅನ್ವಯ ಭಾರತದ ದೇಶೀಯ ಕಂಪನಿಯ ಜತೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು. ಇದೀಗ ಕಂಪನಿಯನ್ನು ಆಯ್ಕೆ ಮಾಡಿಕೊಂಡ ಬಳಿಕ, ಅಗತ್ಯತೆಗಳನ್ನು ಪೂರೈಸಲು ಕಂಪನಿ ಸಾಮರ್ಥ್ಯ ಹೊಂದಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯಲಿದೆ. ಬಳಿಕ ಮುಂದಿನ ಹಂತದಲ್ಲಿ ಭಾರತದಲ್ಲಿ ಅದನ್ನು ಮಹತ್ವದ ಪಾಲುದಾರ ಕಂಪನಿಯಾಗಿ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಕಂಪನಿ ವಿವರಿಸಿದೆ.
ಬಿಎಇ ಸಿಸ್ಟಮ್ಸ್‌ನ ಶಸ್ತ್ರಾಸ್ತ್ರ ವಿಭಾಗದ ಪ್ರಧಾನ ವ್ಯವಸ್ಥಾಪಕ ಹಾಗೂ ಉಪಾಧ್ಯಕ್ಷ ಜೋಯ್ ಸೆಂಟಲ್ ಈ ಬಗ್ಗೆ ಹೇಳಿಕೆ ನೀಡಿ, ಭಾರತದಲ್ಲಿ ರಕ್ಷಣಾ ಉತ್ಪಾದನೆಯ ಸಂಸ್ಥಾಪಕ ಪಾಲುದಾರನಾಗಿ ಮಹೇಂದ್ರ ಕಂಪನಿಯನ್ನು ಆಯ್ಕೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ಉಭಯ ಸರ್ಕಾರಗಳು ಒಪ್ಪಂದ ಮಾಡಿಕೊಳ್ಳಲು ಬೇಕಾದ ಬೆಂಬಲವನ್ನು ನಾವು ನೀಡಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತೀಯ ಸೇನೆಗೆ ಮಹೀಂದ್ರ ಕಂಪನಿ ಕಾರ್ಯಾಚರಣೆ ಲಾಭ ಹಾಗೂ ಅತ್ಯುನ್ನತ ತಂತ್ರಜ್ಞಾನದ ಸೌಲಭ್ಯ ಒದಗಿಸಿಕೊಡಲಿದೆ.







