ಅಂಡರ್-17 ವಿಶ್ವಕಪ್: ಡಿವೈ ಪಾಟೀಲ್ ಸ್ಟೇಡಿಯಂ ವ್ಯವಸ್ಥೆಗೆ ಫಿಫಾ ತೃಪ್ತಿ

ನವಿಮುಂಬೈ, ಫೆ.17: ಭಾರತದಲ್ಲಿ 2017ರಲ್ಲಿ ನಡೆಯಲಿರುವ 17 ವರ್ಷದೊಳಗಿನವರ ಫುಟ್ಬಾಲ್ ವಿಶ್ವಕಪ್ ಪಂದ್ಯಗಳ ಆತಿಥ್ಯವಹಿಸಿರುವ ಸ್ಟೇಡಿಯಂನ ಪೈಕಿ ಒಂದಾಗಿರುವ ನವಿ ಮುಂಬೈನಲ್ಲಿರುವ ಡಿವೈ ಪಾಟೀಲ್ ಸ್ಟೇಡಿಯಂಗೆ ಬುಧವಾರ ಫಿಫಾ ನಿಯೋಗ ಭೇಟಿ ನೀಡಿದ್ದು, ಸ್ಟೇಡಿಯಂನ ವ್ಯವಸ್ಥೆಯ ಬಗ್ಗೆ ತೃಪ್ತಿವ್ಯಕ್ತಪಡಿಸಿದೆ.
ಮುಂದಿನ ವರ್ಷದ ಸೆಪ್ಟಂಬರ್-ಅಕ್ಟೋಬರ್‌ನಲ್ಲಿ 17ನೆ ಆವೃತ್ತಿಯ ಅಂಡರ್-17 ಫುಟ್ಬಾಲ್ ವಿಶ್ವಕಪ್ ಟೂರ್ನಿಯು ನವಿಮುಂಬೈ ಸಹಿತ ಭಾರತದ ಆರು ನಗರಗಳಲ್ಲಿ ನಡೆಯಲಿದೆ. ಗೋವಾ, ಕೊಚ್ಚಿ, ಕೋಲ್ಕತಾ, ಗುವಾಹಟಿ ಹಾಗೂ ಹೊಸದಿಲ್ಲ್ಲಿ ವಿಶ್ವಕಪ್ ಪಂದ್ಯಗಳ ಆತಿಥ್ಯವನ್ನು ವಹಿಸಿಕೊಂಡಿವೆ.
ಫಿಫಾ ವಿಶ್ವಕಪ್ ಟೂರ್ನಿಯ ಮುಖ್ಯಸ್ಥ ಜೈಮಿ ಯಾರ್ಝಾ ಅವರೊಂದಿಗೆ ಟೂರ್ನಿಯ ನಿರ್ದೇಶಕ ಜಾವಿಯೆರ್ ಸೆಪ್ಪಿ ಹಾಗೂ ಡಿ.ವೈ. ಪಾಟೀಲ್ ಸ್ಟೇಡಿಯಂನ ಮಾಲಕರಾದ ವಿಜಯ್ ಪಾಟೀಲ್ ಅವರು ಸ್ಟೇಡಿಯಂನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
‘‘ನಮ್ಮ ಪ್ರಕಾರ ಇದೊಂದು ಉತ್ತಮ ಸ್ಟೇಡಿಯಂ, ಸ್ಟೇಡಿಯಂನ ವ್ಯವಸ್ಥೆಯ ಬಗ್ಗೆ ನಮಗೆ ತೃಪ್ತಿಯಿದೆ. ಡ್ರೆಸ್ಸಿಂಗ್ ರೂಮ್‌ಗಳು, ಡೋಪಿಂಗ್ ಟೆಕ್ನಿಕಲ್ ರೂಮ್‌ಗಳ ನಿರ್ಮಾಣ ಹಾಗೂ ನವೀಕರಣ ಕಾರ್ಯ ನಡೆಯಬೇಕಾಗಿದೆ’’ಎಂದು ಫಿಫಾ ಅಧಿಕಾರಿ ಹೇಳಿದ್ದಾರೆ.
‘‘ಅಂಡರ್-17 ವಿಶ್ವಕಪ್ ಭಾರತದ ಕ್ರೀಡಾಲೋಕಕ್ಕೆ ಐತಿಹಾಸಿಕ ಕ್ಷಣವಾಗಿದೆ. ನಮ್ಮ ವ್ಯವಸ್ಥೆಯನ್ನು ನೋಡಲು ಆಗಮಿಸಿರುವ ಫಿಫಾ ಅಧಿಕಾರಿಗಳ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ. ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಕ್ರಾಂತಿ ನಡೆಸುವತ್ತ ನಾವು ಹೆಜ್ಜೆ ಇಡಲಿದ್ದೇವೆ’’ಎಂದು ವಿಜಯ್ ಪಾಟೀಲ್ ಪ್ರತಿಕ್ರಿಯಿಸಿದರು.







